ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 12.30 ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿರುವ ಸಭೆಯಲ್ಲಿ ತಜ್ಞರ ಸಮಿತಿ ನೀಡಿರುವ ಸಲಹೆ ಮತ್ತು ಶಿಫಾರಸ್ಸು ಆಧಾರದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಸಲಾಗುತ್ತದೆ. ನೈಟ್ ಕರ್ಫ್ಯೂ ಜಾರಿ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತೆ ಕೈಗೊಳ್ಳುವ ಕುರಿತು ಚರ್ಚೆ ನಡೆಯಲಿದೆ.
ಈಗಾಗಲೇ 15 ದಿನ ನೈಟ್ ಕರ್ಫ್ಯೂ ಜಾರಿಗೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿರುವುದರಿಂದ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ. ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಸೋಂಕು ಬೇಗ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ನಿರ್ಧಾರ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.
ಈಗಾಗಲೇ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಬೇಕಾ ಅಥವಾ ಆಯಾ ಜಿಲ್ಲಾಡಳಿತಗಳ ನಿರ್ಧಾರಕ್ಕೆ ಬಿಡಬೇಕಾ ಎನ್ನುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ಕೊರೊನಾ ಸಂಬಂಧ ನಡೆಯುತ್ತಿರುವ ಎರಡನೇ ಸಭೆ ಇದಾಗಿದೆ.
ಮೂರನೇ ಅಲೆ ಭೀತಿ: ಮಹತ್ವದ ಸಭೆ ಕರೆದ ಸಿಎಂ... ನೈಟ್ ಕರ್ಫ್ಯೂ ಜಾರಿಗೆ ಚಿಂತನೆ?
ರಾಜ್ಯದಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಿದ್ದು ಮಹತ್ವದ ಸಭೆ ಕರೆದ ಸಿಎಂ ಬೊಮ್ಮಾಯಿ, ನೈಟ್ ಕರ್ಫ್ಯೂ ಜಾರಿ ಸೇರಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಮತ್ತೆ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಿದ್ದಾರೆ.
cm