ಕರ್ನಾಟಕ

karnataka

6 ದಿನದಲ್ಲೇ 1.25 ಲಕ್ಷ ಕೊರೊನಾ ಕೇಸ್​.. ಅಂದು ಆರೈಕೆ ಕೇಂದ್ರ, ಇಂದು ಮೇಕ್ ಶಿಫ್ಟ್ ಆಸ್ಪತ್ರೆ ಆರಂಭಕ್ಕೆ ಸಿದ್ಧತೆ !

By

Published : Apr 23, 2021, 6:57 PM IST

ಮೊದಲ ಅಲೆಯಲ್ಲಿ ಆರೈಕೆ ಕೇಂದ್ರಗಳ ಅಗತ್ಯತೆ ಎದುರಾಗಿದ್ದರೆ, ಎರಡನೇ ಅಲೆಯಲ್ಲಿ ಐಸಿಯು, ವೆಂಟಿಲೇಟರ್​ಗಳ ಅಗತ್ಯತೆ ದೊಡ್ಡ ಪ್ರಮಾಣದಲ್ಲಿ ಎದುರಾಗುತ್ತಿದೆ. ಇದು ಎರಡನೇ ಅಲೆಯ ಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.

corona
ಕೊರೊನಾ

ಬೆಂಗಳೂರು:ರಾಜ್ಯದಲ್ಲಿ ಕೊರೊನಾ 2ನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು, ಕೇವಲ ಕಳೆದ ಆರು ದಿನಗಳಲ್ಲಿ 1,23,488 ಹೊಸ ಪ್ರಕರಣ ದೃಢಪಟ್ಟಿದ್ದರೆ, ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 33,873 ಮಾತ್ರ.

ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುತ್ತಿದ್ದು, ಸರ್ಕಾರದ ಎಲ್ಲ ಪ್ರಯತ್ನಗಳ ನಡುವೆಯೂ ಸೋಂಕಿನ‌ ಸ್ಫೋಟ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ಒಂದು ವಾರದಲ್ಲೇ ಒಂದು ಕಾಲು ಲಕ್ಷ ಹೊಸ ಪ್ರಕರಣ ದಾಖಲಾಗಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಕೇವಲ ನಾಲ್ಕನೇ ಒಂದು ಭಾಗ ಮಾತ್ರ. ಹೀಗಾಗಿ, ರಾಜ್ಯದಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ಕಳೆದ ಆರು ದಿನದ ಅಂಕಿ ಅಂಶ:
ಏಪ್ರಿಲ್ 17 ರಂದು 17,489 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 5565 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಏಪ್ರಿಲ್ 18 ರಂದು 19,067 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 4,603 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಏಪ್ರಿಲ್ 19 ರಂದು 15,785 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 7,098 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಏಪ್ರಿಲ್ 20 ರಂದು 21,794 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 4,571 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಏಪ್ರಿಲ್ 21 ರಂದು 23,558 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 6412 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಏಪ್ರಿಲ್ 22 ರಂದು 25,795 ಜನರಿಗೆ ಕೊರೊನಾ ಸೋಂಕು ದೃಢಪಟ್ಡಿದ್ದು, 5,624 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ಈ ಪರಿ ಕೊರೊನಾ ಸೋಂಕು ದೃಢಪಡುತ್ತಿರುವುದರಿಂದ ಸರ್ಕಾರ ಒತ್ತಡಕ್ಕೆ ಸಿಲುಕಿದ್ದು, ಕೊರೊನಾ ಬಂದಾಕ್ಷಣ ಆಸ್ಪತ್ರೆಗೆ ಬರಬೇಡಿ ಎನ್ನುವ ಮನವಿ ಮಾಡಲು ಶುರುಮಾಡಿದೆ. ಆಕ್ಸಿಮೀಟರ್ ಮನೆಯಲ್ಲಿಟ್ಟುಕೊಂಡಿರಿ, ಆಮ್ಲಜನಕ ಪ್ರಮಾಣ ಶೇ.90 ಕ್ಕಿಂತ ಕಡಿಮೆಯಾದಲ್ಲಿ ಮಾತ್ರವೇ ಆಸ್ಪತ್ರೆಗೆ ದಾಖಲಾಗಬೇಕು. ಉಳಿದವರು ಹೋಮ್​ ಐಸೋಲೇಷನ್ ಇದ್ದರೆ ಸಾಕು. ಮನೆಯಲ್ಲೇ ಪ್ರತ್ಯೇಕವಾಗಿದ್ದು ಔಷಧ ಪಡೆದುಕೊಂಡರೆ ಸಾಕು. ಟೆಲೆಕಾಲಿಂಗ್ ಮೂಲಕ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸ್ವತಃ ಆರೋಗ್ಯ ಸಚಿವ ಸುಧಾಕರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಈಗಾಗಲೇ ಬಹುತೇಕ ಬೆಡ್​ಗಳು ಭರ್ತಿಯಾಗಿದ್ದು, ಸೋಂಕಿತರು ಬೆಡ್​ಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದು ವೇಳೆ ಬೆಡ್ ಸಿಕ್ಕರೂ ಐಸಿಯು ಮತ್ತು ವೆಂಟಿಲೇಟೆರ್​ಗಾಗಿ ಮತ್ತೊಮ್ಮೆ ರೋಗಿ ಐಸಿಯು ಹಾಗು ವೆಂಟಿಲೇಟರ್​ನಿಂದ ಸಾಮಾನ್ಯ ವಾರ್ಡ್​ಗೆ ಸ್ಥಳಾಂತರ ಇಲ್ಲವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವುದನ್ನು ಕಾಯಬೇಕಾದ ಸನ್ನಿವೇಶ ಬಹುತೇಕ ಸೃಷ್ಟಿಯಾಗಿದೆ.

ಬೆಂಗಳೂರಿನಲ್ಲಿ ಐಸಿಯು, ವೆಂಟಿಲೇಟರ್ ಬೆಡ್ ಕೊರತೆ ಸಾಕಷ್ಟು ಪ್ರಮಾಣದಲ್ಲಿ ತಲೆದೂರಿರುವ ಹಿನ್ನೆಲೆ ಸರ್ಕಾರ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣದ ಯೋಜನೆ ಹಾಕಿಕೊಂಡಿದೆ. 15 ದಿನದಲ್ಲಿ 2 ಸಾವಿರ ಐಸಿಯು ಬೆಡ್​ಗಳ ಮೇಕ್ ಶಿಫ್ಟ್ ಆಸ್ಪತ್ರೆ ಆರಂಭಿಸಲು ಮುಂದಾಗಿದೆ. ಇದರಲ್ಲಿ 800 ವೆಂಟಿಲೇಟರ್ ವ್ಯವಸ್ಥೆ ಅಳವಡಿಕೆ ಮಾಡಿಕೊಂಡಿರಲಿದೆ. ವಿಕ್ಟೋರಿಯಾ ಆವರಣ, ಬೌರಿಂಗ್ ಆಸ್ಪತ್ರೆ, ನಿಮ್ಹಾನ್ಸ್, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ಇತರ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಕೊರೊನಾ ಮೊದಲನೇ ಅಲೆ ವೇಳೆ ಕೋವಿಡ್ ಕೇರ್ ಸೆಂಟರ್​ಗಳ ನಿರ್ಮಾಣ ಮಾಡಲಾಗಿತ್ತು. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10 ಸಾವಿರ ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ರೋಗ ಲಕ್ಷಣ ರಹಿತ ಸೋಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇರುವ ಆಸ್ಪತ್ರೆಗಳಲ್ಲೇ ರೋಗ ಲಕ್ಷಣ ಹೊಂದಿದ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಈಗ 2ನೇ ಅಲೆ ವೇಳೆ ಕೋವಿಡ್ ಕೇರ್ ಸೆಂಟರ್ ಬದಲು ಹೆಚ್ಚಿನ ಪ್ರಮಾಣದಲ್ಲಿ ಬೆಡ್​ಗಳ ಅಗತ್ಯತೆ ಕಂಡು ಬಂದಿದೆ. ಇದಕ್ಕೆ ಪರ್ಯಾಯ ಮಾರ್ಗವಾಗಿ ಸರ್ಕಾರ ಮೇಕ್ ಶಿಫ್ಟ್ ಆಸ್ಪತ್ರೆಗಳ ಆರಂಭಕ್ಕೆ ಮುಂದಾಗಿದೆ.

ಮೊದಲ ಅಲೆಯಲ್ಲಿ ಆರೈಕೆ ಕೇಂದ್ರಗಳ ಅಗತ್ಯತೆ ಎದುರಾಗಿದ್ದರೆ, ಎರಡನೇ ಅಲೆಯಲ್ಲಿ ಐಸಿಯು, ವೆಂಟಿಲೇಟರ್​ಗಳ ಅಗತ್ಯತೆ ದೊಡ್ಡ ಪ್ರಮಾಣದಲ್ಲಿ ಎದುರಾಗುತ್ತಿದೆ. ಇದು ಎರಡನೇ ಅಲೆಯ ಸ್ಥಿತಿಯ ಗಂಭೀರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಓದಿ:ಮಾಜಿ ಸಚಿವ ಆರ್.ವಿ.ದೇಶಪಾಂಡೆಗೆ ಕೊರೊನಾ ಸೋಂಕು

ABOUT THE AUTHOR

...view details