ಕರ್ನಾಟಕ

karnataka

ETV Bharat / city

ಸಿಎಂ ಬಿಎಸ್​​ವೈ, ಸಚಿವರಿಂದ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಹೈಕೋರ್ಟ್ ಅಸಮಾಧಾನ

ಕಳೆದ ಜನವರಿಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪ್ರಮಾಣಪತ್ರ ಸಲ್ಲಿಸಲು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೂ ಕಾಲಾವಕಾಶ ನೀಡುವಂತೆ ಕೋರಿದರು. ಆ ಮನವಿ ಪುರಸ್ಕರಿಸಿದ ಪೀಠ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು..

ಹೈಕೋರ್ಟ್ ಅಸಮಾಧಾನ
ಹೈಕೋರ್ಟ್ ಅಸಮಾಧಾನ

By

Published : Jun 4, 2021, 7:00 PM IST

ಬೆಂಗಳೂರು :ಮೆಟ್ರೋ ಕಾಮಗಾರಿ ಪರಿಶೀಲನೆ ವೇಳೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹಾಗೂ ಇತರೆ ಸಚಿವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಹಾಗೆಯೇ, ಈ ಸಂಬಂಧ ರಾಜ್ಯ ಸರ್ಕಾರ ಸ್ಥಾಪಿಸಿರುವ 'ಕುಂದು ಕೊರತೆ ಪರಿಹಾರ ಘಟಕಕ್ಕೆ ದೂರು ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿರುವ ಹೈಕೋರ್ಟ್, ದೂರುಗಳನ್ನು ಪರಿಗಣಿಸದೆ ಹೋದರೆ ಕುಂದು ಕೊರತೆ ಪರಿಹಾರ ಘಟಕದ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್‌ ಕಿಟ್ ಫೌಂಡೇಷನ್ ಮತ್ತು ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್, ಪೀಠಕ್ಕೆ ಫೋಟೋಗಳ ಸಹಿತ ಮೊಮೋ ಸಲ್ಲಿಸಿ, ಎರಡನೇ ಹಂತದ ಮೆಟ್ರೋ ರೈಲು ಕಾಮಗಾರಿ ಮತ್ತು ಪರೀಕ್ಷಾರ್ಥ ಸಂಚಾರ ಪರಿಶೀಲನೆ ವೇಳೆ ಸಿಎಂ ಯಡಿಯೂರಪ್ಪ, ಸಚಿವರಾದ ಆರ್. ಅಶೋಕ್, ಸೋಮಣ್ಣ ಹಾಗೂ ಬೆಳಗಾವಿಯಲ್ಲಿ ಹೋಮ ನಡೆಸಿದ್ದ ಶಾಸಕ ಅಭಯ್ ಪಾಟೀಲ್, ಆಟೋಚಾಲಕರಿಗೆ ಆಹಾರ ಕಿಟ್ ವಿತರಣೆ ವೇಳೆ ಸಚಿವ ಎಂಟಿಬಿ ನಾಗರಾಜ್ ಅವರು ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ.

ಲಾಕ್‌ಡೌನ್ ಘೋಷಿಸಿ, ಜನರಿಗೆ ಮನೆಯಲ್ಲೇ ಇರುವಂತೆ ಸೂಚಿಸುವ ರಾಜಕಾರಣಿಗಳು, ತಾವು ಮಾತ್ರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕೊರೊನಾ ಸೋಂಕು ವ್ಯಾಪಿಸಲು ಕಾರಣವಾಗುತ್ತಿದ್ದಾರೆ ಎಂದು ವಿವರಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಗೆ ಸಂಬಂಧಿಸಿದ ನಿಮ್ಮ ಎಲ್ಲ ದೂರುಗಳನ್ನು ಸರ್ಕಾರ ಆರಂಭಿಸಿರುವ ಕುಂದು ಕೊರತೆ ಪರಿಹಾರ ಘಟಕಕ್ಕೆ ಸಲ್ಲಿಸಿ. ಒಂದೊಮ್ಮೆ ದೂರುಗಳ ಸಂಬಂಧ ಘಟಕ ಯಾವುದೇ ಕ್ರಮಕೈಗೊಳ್ಳದಿದ್ದರೆ, ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಜರುಗಿಸಲಿದೆ ಎಂದು ಅರ್ಜಿದಾರರಿಗೆ ತಿಳಿಸಿತು. ಅಲ್ಲದೆ, ಕುಂದು ಕೊರತೆ ಪರಿಹಾರ ಘಟಕದ ಸ್ಥಾಪನೆ ಮತ್ತು ಕಾರ್ಯ ನಿರ್ವಹಣೆ ಕುರಿತು ಸಾರ್ವಜನಿಕ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ವಿಜಯೇಂದ್ರ ವಿರುದ್ಧ ಕ್ರಮಕ್ಕೆ ಕಾಲಾವಕಾಶ ಕೋರಿದ ಸರ್ಕಾರ :ಇದೇ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ, ಹೋಮ ನಡೆಸಿದ ಪ್ರಕರಣ ಸಂಬಂಧ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದರು.

ಜೊತೆಗೆ, ಕಳೆದ ಜನವರಿಯಲ್ಲಿ ಬೆಳಗಾವಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ರ‍್ಯಾಲಿಯಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಸಂಬಂಧ ಪ್ರಮಾಣಪತ್ರ ಸಲ್ಲಿಸಲು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೂ ಕಾಲಾವಕಾಶ ನೀಡುವಂತೆ ಕೋರಿದರು. ಆ ಮನವಿ ಪುರಸ್ಕರಿಸಿದ ಪೀಠ, ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ABOUT THE AUTHOR

...view details