ಬೆಂಗಳೂರು :ರಾಜ್ಯದಲ್ಲಿ ಶಾಲೆಗಳು ಯಾವಾಗ ಆರಂಭವಾಗುತ್ತೆ? ನಾವು ಯಾವಾಗ ಶಾಲೆಗೆ ಹೋಗೋದು? ಕೈಗೆ ಸಂಬಳ ಯಾವಾಗ ಸಿಗುತ್ತೆ? ಮಕ್ಕಳ ಭವಿಷ್ಯ ಮುಂದೇನು? ಹೀಗೆ ನೂರಾರು ಪ್ರಶ್ನೆ ಶಿಕ್ಷಕರಿಗೆ ಹಾಗೂ ಶಿಕ್ಷಕೇತರರ ಮನಸ್ಸಿನಲ್ಲಿ ಮೂಡಿದರೂ ಉತ್ತರ ಮಾತ್ರ ಅಸ್ಪಷ್ಟ.
ಕೊರೊನಾ ವೈರಸ್ ಬಂದ ಮೇಲೆ ಯಾರಿಗೂ ಹಿಂದಿನ ಜೀವನ ಶೈಲಿಗೆ ಸಹಜ ಸ್ಥಿತಿಗೆ ಬರಲು ಸಾಧ್ಯವೇ ಆಗುತ್ತಿಲ್ಲ. ಹೊರಗೆ ಕೊರೊನಾ ಕಾಟ, ಮನೆಯೊಳಗೆ ಇರೋಣ ಅಂದ್ರೆ ಹೊಟ್ಟೆಪಾಡಿನ ಸಂಕಟ. ದಿಕ್ಕು ತೋಚದ ಸ್ಥಿತಿಯಲ್ಲಿ ಶಿಕ್ಷಕರ ವೃಂದವಿದೆ. ಅದರಲ್ಲೂ ಹಲವು ಖಾಸಗಿ ಅನುದಾನ ರಹಿತ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ.
ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಶಾಲೆ ನಂಬಿರುವ ಶಿಕ್ಷಕರು- ಶಿಕ್ಷಕರ ಸಂಬಳವನ್ನೇ ನೆಚ್ಚಿಕೊಂಡಿರುವ ಕುಟುಂಬ.. ಹೀಗೇ ಒಂದಕ್ಕೊಂದು ಸರಪಳಿ ಬೆಸೆದಿದೆ. ಕೊರೊನಾ ತಡೆಗೆ ಹಾಕಿದ್ದ ಲಾಕ್ಡೌನ್ ಹಂತ ಹಂತವಾಗಿ ಸಡಿಲಿಸಿದ್ರೂ ರಾಜ್ಯದಲ್ಲಿ ಕೊರೊನಾ ಭೀತಿ ಕಡಿಮೆಯಾಗಿಲ್ಲ. ಖಾಸಗಿ ಶಾಲೆಗಳೆಲ್ಲ ಲಾಭದ ದೃಷ್ಟಿಯಿಂದಲೇ ಸ್ಥಾಪನೆಯಾಗಿವೆ ಎಂಬ ತಪ್ಪು ಕಲ್ಪನೆಗಳಿವೆ. ಶಿಕ್ಷಣವನ್ನೇ ದಂಧೆಯಾಗಿಸಿಕೊಂಡ ಖಾಸಗಿ ಸಂಸ್ಥೆಗಳು ಬಹಳಷ್ಟಿವೆ. ಹಾಗೆಂದು ಎಲ್ಲ ಶಾಲೆಗಳು ಹಣ ಮಾಡುವ ಉದ್ದೇಶದಿಂದ್ಲೇ ಸ್ಥಾಪನೆಯಾಗಿಲ್ಲ. ಬಡವರಿಗೆ, ಸಾಮಾನ್ಯರಿಗೆ ಉತ್ತಮ ಶಿಕ್ಷಣ ತಲುಪಿಸುವಲ್ಲಿ ಖಾಸಗಿ ಶಾಲೆಗಳ ಪಾತ್ರವೂ ಇದೆ. ಪಾಲಕರಿಗೆ ದುಬಾರಿಯೆನಿಸದ ಶುಲ್ಕ ವಿಧಿಸಿ, ಉತ್ತಮ ಶಿಕ್ಷಣ ನೀಡುತ್ತ ಬಂದಿವೆ.
ಪಂಚತಾರಾ ಮಟ್ಟದ ಖಾಸಗಿ ಶಾಲೆಗಳನ್ನು ಹೊರಗಿಟ್ಟು, ಸರ್ಕಾರವೂ ಮಧ್ಯಮ ಹಂತದ ಖಾಸಗಿ ಶಿಕ್ಷಣ ಸಂಸ್ಥೆಗಳ ಅಳಲು ಕೇಳಬೇಕಿದೆ. ಜುಲೈನಲ್ಲಿ ಶಾಲೆ ಆರಂಭಿಸುವ ತಯಾರಿ ಇತ್ತಾದ್ರೂ, ಕೊರೊನಾ ಕಂಟ್ರೋಲ್ ಬರೋವರೆಗೆ ಅದು ಸಾಧ್ಯವಿಲ್ಲ. ಲಾಭವೂ ಇಲ್ಲದೆ ನಷ್ಟವೂ ಆಗದಂತಿದ್ದ ಶಿಕ್ಷಣ ಸಂಸ್ಥೆಗಳು ಮುಚ್ಚುವ ಪರಿಸ್ಥಿತಿಯಲ್ಲಿವೆ. ಶಾಲಾ ಕಟ್ಟಡದ ಬಾಡಿಗೆ, ಸಿಬ್ಬಂದಿ ವೇತನ, ನಿರ್ವಹಣೆ, ಬ್ಯಾಂಕ್ ಸಾಲ, ಅದರ ಬಡ್ಡಿ ಕಟ್ಟಲಾಗದೆ ಎಷ್ಟೋ ಆಡಳಿತ ಮಂಡಳಿಗಳು ಶಾಲೆಗಳನ್ನು ಮಾರಾಟ ಮಾಡಲು ಮುಂದಾಗಿವೆ. ಈ ಶಾಲೆಗಳು ಮುಚ್ಚಿದ್ರೆ ಸಾವಿರಾರು ಮಕ್ಕಳ ಭವಿಷ್ಯ ಅತಂತ್ರ. ಜತೆಗೆ ಸಿಬ್ಬಂದಿ ಬೀದಿಗೆ ಬೀಳ್ತಾರೆ.
ಕೋವಿಡ್ ಸಂಕಷ್ಟದ ಬಗ್ಗೆ ಕ್ಯಾಮ್ಸ್ನ ಕಾರ್ಯದರ್ಶಿ ಶಶಿಕುಮಾರ್ ಮಾತಾನಾಡಿದ್ದು, ಕೆಲ ಶಾಲೆಗಳಿಗೆ ಆರ್ಟಿಇ ಮರುಪಾವತಿ ಆಗಬೇಕು. ಸಂಸ್ಥೆಗಳು ಶಿಕ್ಷಕರಿಗೆ ಸಂಬಳ ಕೊಡಲು ಆಗದ ಕೆಟ್ಟ ಪರಿಸ್ಥಿತಿಯಲ್ಲಿವೆ ಎಂದರು. ಹಳ್ಳಿಗಳಲ್ಲಿರುವ ಶಾಲೆಗಳ ಸ್ಥಿತಿ ಇನ್ನೂ ಹೀನಾಯವಾಗಿದೆ. ಪೋಷಕರಿಗೆ ಮಕ್ಕಳನ್ನ ಶಾಲೆಗೆ ಕಳುಹಿಸಲು ಭಯ. ಇತ್ತ ಶಾಲೆಗಳು ತೆರೆಯದೇ ಶಿಕ್ಷಕರಿಗೆ ಭವಿಷ್ಯದ ಆತಂಕ. ಕೊರೊನಾ ಹೀಗೇ ತನ್ನ ಚದುರಂಗದಾಟ ನಡೆಸಿದ್ರೆ ಬದುಕು ಬಲು ದುಸ್ತರ.