ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೊರೊನಾ ಹೊಸ ಮಾರ್ಗಸೂಚಿ ಜಾರಿಯಾಗಿದ್ದು, ವಾಣಿಜ್ಯ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸಕ್ಕೆ 800-1000 ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಮೇ 4ರವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಒಳಗೊಂಡಂತೆ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. 14 ದಿನಗಳ ಕಾಲ ಮಾಲ್, ಥಿಯೇಟರ್, ರಂಗಮಂದಿರ ಮುಚ್ಚಲಿದ್ದು, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಕಲ್ಪಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಹೀಗಾಗಿ ಸರ್ಕಾರದ ಆದಾಯಕ್ಕೆ ಹೊಡೆತ ಬೀಳುವುದು ಬಹುತೇಕ ಖಚಿತವಾಗಿದೆ.
ವೀಕೆಂಡ್ ಕರ್ಫ್ಯೂ - ಆದಾಯಕ್ಕೆ ಹೊಡೆತ!
ಏಪ್ರಿಲ್ 24-25 ಮತ್ತು ಮೇ 1-2ರಂದು ಒಟ್ಟು ನಾಲ್ಕು ದಿನ ಇಡೀ ದಿನ ಕರ್ಫ್ಯೂ ಇರುವ ಕಾರಣ ವಾಣಿಜ್ಯ ಚಟುವಟಿಕೆ ಬಂದ್ ಆಗಲಿದ್ದು, ನಾಲ್ಕು ದಿನದ ಆದಾಯಕ್ಕೆ ಹೊಡೆತ ಬೀಳಲಿದೆ. ಅಲ್ಲದೆ ಬಾಕಿ 10 ದಿನದಲ್ಲಿ ಅಗತ್ಯ ವಸ್ತುಗಳ ವಲಯಕ್ಕೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಅವಕಾಶವಿದ್ದು, ಉಳಿದಿದ್ದಕ್ಕೆ ಕೆಲ ನಿರ್ಬಂಧ ಇರುವ ಕಾರಣ ಆರ್ಥಿಕತೆಗೆ ಹೊಡೆತ ಬೀಳಲಿದೆ.
ಕನಿಷ್ಠ ಸಿಬ್ಬಂದಿ ಬಳಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆರ್ಟಿಒ ಕಚೇರಿಯಲ್ಲಿ ವಾಹನ ನೋಂದಣಿಗಳ ಸಂಖ್ಯೆ ಇಳಿಕೆಯಾಗಲಿದ್ದು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿಯೂ ಸ್ವತ್ತುಗಳ ನೋಂದಣಿಯಲ್ಲಿ ಇಳಿಮುಖವಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಮತ್ತು ಆರ್ಟಿಒ ಪ್ರಮುಖವಾಗಿದ್ದು, ಇವುಗಳ ಆದಾಯದಲ್ಲಿ ಇಳಿಕೆಯಾಗಲಿದೆ.