ಬೆಂಗಳೂರು: ಗೋಹತ್ಯೆ ನಿಷೇಧ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಲೇ ಬಂದಿದೆ. ಗೋಪೂಜೆ ಮಾಡುವರು ನಾವೇ, ಬಿಜೆಪಿಗರು ಪೂಜೆ ಮಾಡುವ ಗಿರಾಕಿಗಳಲ್ಲ. ಕೇವಲ ಫೋಟೋಗೋಸ್ಕರ ಪೂಜೆ ಮಾಡುತ್ತಾರೆ ಅಷ್ಟೇ. ಎಂದೂ ಸೆಗಣಿನೇ ಎತ್ತದವರು ಈಗ ಗೋಮಾತೆ ಎಂದು ಪಾಠ ಮಾಡುತ್ತಿದ್ದಾರೆ. ಡೋಂಗಿ ಗಿರಾಕಿಗಳು ಗೋಹತ್ಯೆ ನಿಷೇಧ ಕಾನೂನು ತಂದಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರೈತ, ದಲಿತ, ಕಾರ್ಮಿಕ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಂಯುಕ್ತ ಹೋರಾಟದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ರೈತ ವಿರೋಧಿ ಕಾನೂನು, ಕಾರ್ಮಿಕ ಕಾನೂನುಗಳ ತಿದ್ದುಪಡಿ, ದಲಿತ, ಮಹಿಳಾ ಸಬಲೀಕರಣಕ್ಕೆ ಆಗ್ರಹಿಸಿ ಈ ಎಲ್ಲಾ ಸಂಘಟನೆಗಳ ಸಮನ್ವಯ ಸಮಿತಿಯಿಂದ ಫ್ರೀಡಂ ಪಾರ್ಕ್ನಲ್ಲಿ ಸಂಯುಕ್ತ ಹೋರಾಟ ನಡೆಯಿತು. ಮೂರು ದಿನಗಳ ಕಾಲ ನಡೆದ ಜನ ಪರ್ಯಾಯ ಬಜೆಟ್ ಅಧಿವೇಶನದ ನಿರ್ಣಯಗಳನ್ನು ಸಿದ್ದರಾಮಯ್ಯ ಸ್ವೀಕರಿಸಿದರು.
ಹೋರಾಟದಲ್ಲಿ ಭಾಗವಹಿಸಿದ ನಂತರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದ್ದರು. ಆದರೆ ಕಾಯಿಲೆ ಬಿದ್ದ, ಗಂಡು ಕರುಗಳನ್ನು ಎಲ್ಲಿ ತೆಗೆದುಕೊಂಡು ಹೋಗಿ ಕಟ್ಟಬೇಕು. ಬೀಫ್ನ ಇಲ್ಲಿ ತಯಾರಿಸುವಹಾಗಿಲ್ಲ ಎನ್ನುತ್ತಾರೆ. ಆದರೆ ಹೊರಗಡೆಯಿಂದ ತರಿಸಬಹುದು, ರಫ್ತು ಕೂಡಾ ಮಾಡಬಹುದು ಎನ್ನುವುದು ದ್ವಂದ್ವ ನೀತಿ ಎಂದು ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು. ಅಲ್ಲದೆ, ಇದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದರು.
ಶೇ. 60 ರಷ್ಟು ಕೈಗಾರಿಕೆಗಳು ಬಂದ್:ನಿರುದ್ಯೋಗದ ಕುರಿತು ಮಾತನಾಡಿ, ದೇಶದಲ್ಲಿ ಕೋವಿಡ್ ಮೊದಲು 11 ಕೋಟಿ ಉದ್ಯೋಗವಿತ್ತು. ಈಗ ನೋಡಿದರೆ ಶೇ 60 ರಷ್ಟು ಕೈಗಾರಿಕೆಗಳು ಬಂದ್ ಆಗಿವೆ. ಈಗಿನ ಯುವಕ ಯುವತಿಯರು ಭವಿಷ್ಯ ರೂಪಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ನರೇಂದ್ರ ಮೋದಿ ಬಂದ ಮೇಲೆ 100 ಲಕ್ಷ ಕೋಟಿ ಸಾಲ ಹೆಚ್ಚಾಗಿದೆ. ಕೇವಲ ಬಡ್ಡಿ ಮತ್ತು ಅಸಲು ಸೇರಿ ಮುಂದಿನ ವರ್ಷ 43 ಸಾವಿರ ಕೋಟಿ ಕಟ್ಟಬೇಕಾಗುತ್ತದೆ ಎಂದರು.
ಇದನ್ನೂ ಓದಿ:ನಿಷೇಧಿತ ಕಳೆ ನಾಶಕ ಬಗ್ಗೆ ಚರ್ಚೆ : ತೊಂದರೆಯಾದ ದೂರು ಬಂದಿಲ್ಲ ಎಂದ ಬಿ.ಸಿ.ಪಾಟೀಲ್ಗೆ ಸ್ಪೀಕರ್ ಚಾಟಿ