ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಇದುವರೆಗೆ 52 ಲಕ್ಷ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಸ್.ಟಿ.ಸೋಮಶೇಖರ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯೋಜನೆಯಡಿ ರೈತರ ಖಾತೆಗೆ ತಲಾ 2,000 ರೂಪಾಯಿಯಂತೆ 3 ಬಾರಿ ಒಟ್ಟು ಪ್ರತಿ ವರ್ಷಕ್ಕೆ 6,000 ರೂ.ಗಳನ್ನು ಕೇಂದ್ರ ಸರ್ಕಾರ ನೀಡಿದ್ದು, ಜತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕೆ 4,000 ರೂ.ಗಳನ್ನು ಸೇರಿಸಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಿದ್ದಾರೆ. ಆತ್ಮ ನಿರ್ಭರ ಭಾರತ ಯೋಜನೆಯಡಿಯಲ್ಲಿ 1 ಲಕ್ಷ ಕೋಟಿ ಮೊತ್ತವನ್ನು ಕೃಷಿ ಕ್ಷೇತ್ರದ ಮೂಲಭೂತ ಸೌಕರ್ಯದ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಇದರ ಜೊತೆಗೆ ಎಪಿಎಂಸಿ ವಿಚಾರದಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅವುಗಳನ್ನು ಡಿಸೆಂಬರ್ 25ರಂದು ನಡೆಯುವ ಭಾಷಣದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರಿಸಲಿದ್ದಾರೆ ಎಂದರು.
ಡಿ. 25ರಂದು ಮುಖ್ಯಮಂತ್ರಿಗಳು ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಂಪಿಎಂಸಿ ಪರಿಶೀಲನೆ ಕುರಿತು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಇದೇ ಸಂದರ್ಭದಲ್ಲಿ ರೈತರನ್ನು ಗೌರವಿಸುವ ಕಾರ್ಯವೂ ಆಗಲಿದೆ. ಇದಾದ ಬಳಿಕ ಜನವರಿ ಮೊದಲನೇ ವಾರದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಆಗುವ ಅನುಕೂಲಗಳನ್ನು ವಿವರಿಸುವ ಕಾರ್ಯಕ್ರಮ ನಡೆಯಲಿದೆ. ರಾಜ್ಯದ 30 ಜಿಲ್ಲೆಗಳ ಪ್ರವಾಸ ಕೈಗೊಂಡು ಎಪಿಎಂಸಿ ಕಾಯ್ದೆಯಿಂದ ಆಗುವ ಅನುಕೂಲಗಳು ಹಾಗೂ ಮುಂದಿನ ಸೌಕರ್ಯಗಳ ಕುರಿತು ವಿವರ ನೀಡಲಿದ್ದೇವೆ. ಸಹಕಾರ ಇಲಾಖೆಯ ಮೂಲಕ ರಾಜ್ಯಾದ್ಯಂತ ಎಪಿಎಂಸಿ ಕಾಯ್ದೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಿದ್ದೇವೆ. ಇದಕ್ಕೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಸಚಿವರು ಮತ್ತು ಶಾಸಕರು ಸಾಥ್ ನೀಡಲಿದ್ದಾರೆ ಎಂದರು.
ಇ-ಮಾರುಕಟ್ಟೆ ಸ್ಥಾಪನೆಯ ಮೂಲಕ ರೈತರ ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಜೋಡಣೆ ಮಾಡಲಾಗಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ. ಇತ್ತೀಚೆಗೆ ಕಬ್ಬು ಬೆಳೆಯುವ ರೈತರ ಹಿತಕ್ಕಾಗಿ 3,500 ಕೋಟಿ ಮೊತ್ತದ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದಾಗಿ 5 ಕೊಟಿ ಕಬ್ಬು ಬೆಳೆಗಾರರಿಗೆ ಲಾಭವಾಗಲಿದ್ದು, ಸಬ್ಸಿಡಿ ಹಣ ನೇರವಾಗಿ ಅವರ ಖಾತೆ ಜಮೆ ಆಗಲಿದೆ. ಪಶು ಸಂಗೋಪನಾ ಮೂಲ ಸೌಕರ್ಯ ನಿಧಿ ಯೋಜನೆ ಅಡಿಯಲ್ಲಿ 15 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಈ ಎಲ್ಲಾ ಪ್ರಯತ್ನಗಳಿಂದಾಗಿ 2014ರಲ್ಲಿ 250 ಮಿಲಿಯನ್ ಟನ್ನಷ್ಟಿದ್ದ ಆಹಾರ ಧಾನ್ಯಗಳ ಉತ್ಪಾದನೆ 2020ರ ವೇಳೆಗೆ ದಾಖಲೆ ಮಟ್ಟದ 291 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ. ಇಳುವರಿ ಹೆಚ್ಚಳದಿಂದ ಸುಮಾರು ಶೇಕಡಾ 20ರಿಂದ 30ರಷ್ಟು ಆದಾಯ ಹೆಚ್ಚಲು ಸಾಧ್ಯವಾಗಿದೆ ಎಂದರು.
ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ರೈತರ ವಿರೋಧಿಯಾಗಿ ಜಾರಿಗೆ ತಂದಿಲ್ಲ. ರೈತರು ಇದನ್ನು ಆದಷ್ಟು ಬೇಗ ಅರ್ಥ ಮಾಡಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿರುವ ಕಾಯ್ದೆಯಲ್ಲಿ ಕೆಲ ಮಾರ್ಪಾಡು ಮಾಡಿದೆ. ಈ ಸಂಬಂಧ ಆದೇಶ ಇನ್ನೇನು ಬರಬೇಕಿದೆ. ರೈತರಿಗೆ ತಿಳಿಹೇಳುವ ಕಾರ್ಯ ಮಾಡೋಣ. ರೈತರಿಗೆ ಇರುವ ಅನುಮಾನವನ್ನು ಸ್ಥಳದಲ್ಲೇ ಬಗೆಹರಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದರು.
ರೈತರಿಗೆ ಸನ್ಮಾನ:
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಅಟಲ್ ಜೀ ಜನ್ಮದಿನವನ್ನು ಕಿಸಾನ್ ದಿನ ಎಂದು ಆಚರಣೆ ಮಾಡಬೇಕು. ಈ ಕುರಿತು ನಾವು ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡುತ್ತೇವೆ. 80 ಕೋಟಿ ರೈತರಿಗೆ 18 ಸಾವಿರ ಕೋಟಿ ಹಣ ಖಾತೆಗೆ ಜಮೆ ಆಗಲಿದೆ. ಕಿಸಾನ್ ದಿನಾಚರಣೆಯಂದು ರೈತರ ಖಾತೆಗೆ ಹಣ ಹಾಕಿ, ರೈತರಿಗೆ ಸನ್ಮಾನ ಮಾಡುವ ಕಾರ್ಯ ಮಾಡುತ್ತೇವೆ ಎಂದು ವಿವರಿಸಿದರು.