ಬೆಂಗಳೂರು: ಸಚಿವರುಗಳ ವಿವಾದಾತ್ಮಕ ಹೇಳಿಕೆಗಳಿಂದ ಬೊಮ್ಮಾಯಿ ಸರ್ಕಾರ ಪ್ರತಿಪಕ್ಷಗಳ ಟೀಕೆ ಹಾಗೂ ಜನಾಕ್ರೋಶಕ್ಕೆ ಕಾರಣವಾಯಿತು. ಕಳೆದ ಒಂದು ವರ್ಷದ ಆಡಳಿತದಲ್ಲಿ ಬೊಮ್ಮಾಯಿ ಸರ್ಕಾರವನ್ನು ಕಾಡಿದ ವಿವಾದಿತ ಹೇಳಿಕೆಗಳ ವಿವರ ಇಲ್ಲಿದೆ.
1. ನೈತಿಕ ಪೊಲೀಸ್‌ಗಿರಿ ಬಗ್ಗೆ ಸಿಎಂ ಹೇಳಿಕೆ:ಸ್ವತಃ ಸಿಎಂ ಬೊಮ್ಮಾಯಿ 'ನೈತಿಕ ಪೊಲೀಸ್‌ಗಿರಿ' ಬಗ್ಗೆ ವಿವಾದಿತ ಹೇಳಿಕೆ ನೀಡಿ ಪ್ರತಿಪಕ್ಷಗಳ ಬಾಯಿಗೆ ಆಹಾರವಾದರು. ಸಮಾಜದಲ್ಲಿ ಅನೇಕ ಭಾವನೆಗಳಿವೆ. ಆ ಭಾವನೆಗಳನ್ನು ಕೆರಳಿಸಬಾರದು. ಒಂದು ವೇಳೆ ಭಾವನೆಗಳಿಗೆ ಧಕ್ಕೆ ಬಂದರೆ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.
ಸಿಎಂ ಈ ಹೇಳಿಕೆ ನೈತಿಕ ಪೊಲೀಸ್‌ಗಿರಿಗೆ ಇಂಬು ನೀಡುವಂತಿದೆ ಎಂದು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಬೇಕಾಯಿತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಮಂಗಳೂರಿನ ಮೆಡಿಕಲ್ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪ್ರತಿಕ್ರಿಯಿಸುತ್ತಾ ಸಿಎಂ ನೈತಿಕ ಪೊಲೀಸ್‌ಗಿರಿ ಎಂಬುದು ಸೂಕ್ಷ್ಮ ವಿಚಾರ. ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ನೈತಿಕತೆ ಇಲ್ಲದೆ ಬದುಕೋಕೆ ಆಗುತ್ತಾ?. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರುವುದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಆಗುತ್ತೆ ಎಂದು ತಿಳಿಸಿದ್ದರು. ಸಂಘಟನೆಯೊಂದು ಸಿಎಂ ಬೊಮ್ಮಾಯಿಗೆ ಈ ವಿವಾದಾತ್ಮಕ ಹೇಳಿಕೆ ಸಂಬಂಧ ಲೀಗಲ್ ನೋಟಿಸ್ ಜಾರಿ ಮಾಡಿತ್ತು.
2. ಇಕ್ಕಟ್ಟಿಗೆ ಸಿಲುಕಿಸಿದ ಕೆ.ಎಸ್.ಈಶ್ವರಪ್ಪ ಹೇಳಿಕೆಗಳು: ಕಮಿಷನ್ ಆರೋಪದ ಮಸಿಯಿಂದ ಮಂತ್ರಿಗಿರಿ ಕಳೆದುಕೊಂಡ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಗೆ ಗ್ರಾಸವಾಗುತ್ತಾರೆ. ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆ ನೀಡಿ ಸರ್ಕಾರವನ್ನು ಪೇಚಿಗೆ ಸಿಲುಕಿದ ಪ್ರಸಂಗ ಸಾಕಷ್ಟಿದೆ.
- "ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು": ಆಗಸ್ಟ್ 2021ರಲ್ಲಿ ಶಿವಮೊಗ್ಗದಲ್ಲಿ ನಡೆದ ಬಿಜೆಪಿ ನಗರ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡುತ್ತಾ ಕೆ.ಎಸ್.ಈಶ್ವರಪ್ಪ, ಈ ಹಿಂದೆ ಹಿಂದುತ್ವದ ಬಗ್ಗೆ ಮಾತಾಡಿದ್ರೆ ಕೊಲೆ ಆಗ್ತಾ ಇತ್ತು. ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಆಗ ವಾಪಾಸ್ ಹೊಡಿಯೋ ಶಕ್ತಿ ನಮಗೆ ಇರಲಿಲ್ಲ. ಆದರೆ ಈಗ ದೇಶದಲ್ಲಿ ಬಿಜೆಪಿ ದೊಡ್ಡದಾಗಿ ಬೆಳೆಯುತ್ತಿದೆ. ನಮಗೆ ಈಗ ತಿರುಗಿಸಿ ಹೊಡೆಯುವ ಶಕ್ತಿ ಬಂದಿದೆ. ಹೀಗಾಗಿ ಯಾರು ನಮ್ಮ ಕಾರ್ಯಕರ್ತರ ಮೇಲೆ ಯಾವುದರಲ್ಲಿ ಹೊಡೀತಾರೋ ಅದರಲ್ಲಿತೇ ತಿರುಗಿಸಿ ಹೊಡೆಯಿರಿ. ಒಂದಕ್ಕೆ ಎರಡು ತೆಗೀರಿ ಎಂಬ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
- "ಭಾಗವಧ್ವಜ ರಾಷ್ಟ್ರೀಯ ಧ್ವಜವಾಗಬಹುದು":ಫೆಬ್ರವರಿ 2022ರಂದು ವಿಧಾನಸೌಧದಲ್ಲಿ ಮಾತನಾಡುತ್ತಾ, ಮುಂದೊಂದು ದಿನ ಭಾಗವಧ್ವಜವೇ ರಾಷ್ಟ್ರ ಧ್ವಜ ಆಗಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೇಶದ್ಯಾಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇತ್ತ ಬೊಮ್ಮಾಯಿ ಸರ್ಕಾರ ಈಶ್ವರಪ್ಪರ ಹೇಳಿಕೆಯಿಂದ ಮುಜುಗರಕ್ಕೊಳಗಾಗಬೇಕಾಯಿತು. ಈ ಹೇಳಿಕೆಯನ್ನು ಖಂಡಿಸಿ ಹಾಗೂ ಮಂತ್ರಿಗಿರಿಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.
3. ಉಮೇಶ್ ಕತ್ತಿ ಪ್ರತ್ಯೇಕ ರಾಜ್ಯದ ವರಸೆ: ಅರಣ್ಯ ಸಚಿವ ಉಮೇಶ್ ಕತ್ತಿಯ ಪ್ರತ್ಯೇಕ ರಾಜ್ಯ ರಚಿಸುವ ವಿವಾದಾತ್ಮಕ ಹೇಳಿಕೆ ಬೊಮ್ಮಾಯಿ ಸರ್ಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕುವಂತೆ ಮಾಡಿತು. "ಪ್ರಧಾನಿ ಮೋದಿ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲಿದ್ದಾರೆ" ಎಂಬ ಹೇಳಿಕೆ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿತು. ಕತ್ತಿ ಅವರ ಪ್ರತ್ಯೇಕ ರಾಜ್ಯ ಕುರಿತ ಹೇಳಿಕೆಯನ್ನು ಆರೂವರೆ ಕೋಟಿ ಕನ್ನಡಿಗರ ಪರ ಖಂಡಿಸುತ್ತೇನೆಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅಸಮಾಧಾನ ಹೊರಹಾಕಿದರೆ, ಸರ್ಕಾರದ ಮುಂದೆ ಪ್ರತ್ಯೇಕ ರಾಜ್ಯದ ಪ್ರಸ್ತಾಪವೇ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದರು.
4. ಸಚಿವ ಸುಧಾಕರ್ ಎಡವಟ್ಟು ಹೇಳಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ದೇಶದಲ್ಲಿನ ಆಧುನಿಕ ಮಹಿಳೆಯರು ಒಬ್ಬರೇ ಜೀವನ ನಡೆಸಲು ಬಯಸುತ್ತಿದ್ದಾರೆ. ವಿವಾಹವಾದರೂ ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡುತ್ತಿಲ್ಲ. ಬದಲಾಗಿ ಬಾಡಿಗೆ ತಾಯ್ತನವನ್ನು ಅನುಸರಿಸುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನಕ್ರೋಶ ವ್ಯಕ್ತವಾಗಿತ್ತು.