ಕರ್ನಾಟಕ

karnataka

ETV Bharat / city

ವಾರಂಟಿ ಇದ್ರೂ ಸೇವೆ ನೀಡದ ಸ್ಯಾಮ್​ಸಂಗ್ ಸಂಸ್ಥೆ: ಕೋರ್ಟ್​ನಲ್ಲಿ ಗೆದ್ದು ಪರಿಹಾರ ಪಡೆದ ಬೆಂಗಳೂರಿನ ಗ್ರಾಹಕ - ಟಿವಿ ಸಂಸ್ಥೆಗೆ ದಂಡ ಹಾಕಿದ ಗ್ರಾಹಕ ಕೋರ್ಟ್

ಗ್ರಾಹಕರ ಟಿವಿ ಪ್ಯಾನೆಲ್ ಸರಿಪಡಿಸಿಕೊಡುವಂತೆ ಹಾಗೂ ಕೋರ್ಟ್ ಅಲೆಯುವಂತೆ ಮಾಡಿದ್ದಕ್ಕೆ ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡುವಂತೆ ಸ್ಯಾಮ್‌ಸಂಗ್‌ ಟಿವಿ ಕಂಪನಿಗೆ ಕೋರ್ಟ್ ಆದೇಶಿಸಿದೆ.

ಪರಿಹಾರ ನೀಡುವಂತೆ ಸ್ಯಾಮ್‌ಸಂಗ್ ಟಿವಿ​ ಕಂಪನಿಗೆ ಆದೇಶ
ಪರಿಹಾರ ನೀಡುವಂತೆ ಸ್ಯಾಮ್‌ಸಂಗ್ ಟಿವಿ​ ಕಂಪನಿಗೆ ಆದೇಶ

By

Published : May 10, 2022, 8:25 PM IST

ಬೆಂಗಳೂರು: 70 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದ ಟಿವಿ ಕೈಕೊಟ್ಟ ಬಳಿಕ ವಾರಂಟಿ ಪ್ರಕಾರ ಸರ್ವೀಸ್ ಕೊಡಲು ಮೀನಾಮೇಷ ಎಣಿಸಿದ ಸ್ಯಾಮ್‌ಸಂಗ್‌ ಟಿವಿ ಕಂಪನಿಗೆ ಗ್ರಾಹಕ ಕೋರ್ಟ್ ಬಿಸಿ ಮುಟ್ಟಿಸಿದೆ. ವರ್ಷ ತುಂಬುವ ಮುನ್ನವೇ ಟಿವಿ ಹಾಳಾಗಿದ್ದು, ವಾರಂಟಿ ಪ್ರಕಾರ ಅದನ್ನು ಸರಿಪಡಿಸಿಕೊಟ್ಟಿಲ್ಲ ಎಂದು ಬೆಂಗಳೂರಿನ ಕೆ.ಆರ್ ಪುರ ನಿವಾಸಿ ವಿನೀತ್ ಕುಮಾರ್ ಎಂಬುವರು ದೂರು ಸಲ್ಲಿಸಿದ್ದರು.

ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ವಿಚಾರಣೆ ನಡೆಸಿ, ಗ್ರಾಹಕರ ಟಿವಿ ಪ್ಯಾನಲ್ ಸರಿಪಡಿಸಿಕೊಡುವಂತೆ ಹಾಗೂ ಕೋರ್ಟ್​ಗೆ ಅಲೆಯುವಂತೆ ಮಾಡಿದ್ದಕ್ಕೆ ಗ್ರಾಹಕರಿಗೆ 3 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ವಿನೀತ್‌ ಕುಮಾರ್‌ 2020ರ ಅಕ್ಟೋಬರ್‌ 3ರಂದು 70,900 ರೂಪಾಯಿ ಪಾವತಿಸಿ ಸ್ಯಾಮ್‌ಸಂಗ್‌ ಟಿವಿ ಖರೀದಿಸಿದ್ದರು. 2021ರ ಅಕ್ಟೋಬರ್‌ 3ಕ್ಕೆ ವಾರಂಟಿ ಮುಗಿಯುವುದಿತ್ತು. ಆದರೆ, 2021ರ ಜೂನ್‌ನಲ್ಲಿ ಟಿವಿಯ ಡಿಸ್‌ಪ್ಲೇ ಕಪ್ಪು ಬಣ್ಣಕ್ಕೆ ತಿರುಗಲಾರಂಭಿಸಿತ್ತು. ಸಮಸ್ಯೆ ಹೆಚ್ಚಾದ ಕಾರಣ ಕಂಪನಿಯ ತಂತ್ರಜ್ಞರಿಗೆ ದೂರು ನೀಡಿದ್ದರು. ಆದರೆ, ಸೂಕ್ತ ಸಮಯದಲ್ಲಿ ಸೇವೆ ನೀಡಿರಲಿಲ್ಲ.

ಅದಾದ 29 ದಿನಗಳ ಬಳಿಕ 50 ಇಂಚು ಸ್ಯಾಮ್‌ಸಂಗ್‌ ಟಿವಿ ಬದಲಿಗೆ 48 ಇಂಚು ಸ್ಯಾಮ್‌ಸಂಗ್‌ ಟಿವಿ ತಂದಿದ್ದರು. ಇದಕ್ಕೆ ದೂರುದಾರರು ಒಪ್ಪಿರಲಿಲ್ಲ. ಸೇವೆ ನೀಡಲು ಸತಾಯಿಸಿದ ಹಿನ್ನೆಲೆಯಲ್ಲಿ ವಿನೀತ್ ಕುಮಾರ್ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋಗ 60 ದಿನಗಳ ಒಳಗೆ ಟಿವಿ ಪ್ಯಾನೆಲ್ ಸರಿಪಡಿಸಿಕೊಡಬೇಕು. ಹಾಗೆಯೇ ಕೋರ್ಟ್ ವೆಚ್ಚವಾಗಿ ದೂರುದಾರ ಗ್ರಾಹಕರಿಗೆ 3 ಸಾವಿರ ರೂ. ನೀಡಬೇಕು ಆದೇಶ ಹೊರಡಿಸಿದೆ.

(ಇದನ್ನೂ ಓದಿ: ಧ್ವನಿ ವರ್ಧಕ ಬಳಕೆ ಸಂಬಂಧ ಮಾನದಂಡ ನಿಗದಿ: ಸರ್ಕಾರದಿಂದ ಆದೇಶ)

ABOUT THE AUTHOR

...view details