ಬೆಂಗಳೂರು: ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇಲ್ಲದ ರಾಜ್ಯದ 9 ಜಿಲ್ಲೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆರಂಭ ಮಾಡುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪ ವೇಳೆ ರಾಜ್ಯದಲ್ಲಿ ಹೊಸ ಮೆಡಿಕಲ್ ಕಾಲೇಜು ಆರಂಭವಾಗುತ್ತಿವೆ. ಆದರೆ, ಚಿಕ್ಕಬಳ್ಳಾಪುರಕ್ಕೆ ಮಾತ್ರ ಯಾಕೆ ಹೆಚ್ಚು ಅನುದಾನ?. ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಹೊಸ ಕಾಲೇಜುಗಳಿಗೆ ಅನುದಾನ ಕಡಿಮೆ ಯಾಕೆ? ಎಂದು ಎಸ್.ವಿ.ಸಂಕನೂರು ಆರೋಗ್ಯ ಸಚಿವರಿಗೆ ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಮೊದಲೇ ಪ್ರಾರಂಭವಾಗಿದೆ. ಹಾವೇರಿಯಲ್ಲಿ ಜಾಗದ ಸಮಸ್ಯೆ ಇತ್ತು ಅದಕ್ಕೆ ಪ್ರಗತಿ ಕಾರ್ಯ ಹಿಂದುಳಿದಿದೆ. 2022 ರ ಜೂನ್ ಅಂತ್ಯಕ್ಕೆ ಕಾಮಗಾರಿ ಮುಗಿಸಲು ಕಾಲಮಿತಿ ನೀಡಿದ್ದೇವೆ. ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲ, ಹೀಗಾಗಿ ಸಾರ್ವಜನಿಕ ಹೂಡಿಕೆಯಿಂದ ಕಾಲೇಜು ಸ್ಥಾಪಿಸಲು ಚಿಂತನೆ ನಡೆದಿದೆ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಚಿಂತನೆ ನಡೆಸಿದ್ದೇವೆ. ರಾಜ್ಯದಲ್ಲಿ ವೈದ್ಯರ ಕೊರತೆ ಇದ್ದು, ಈ ಕುರಿತು ಗಮನ ಹರಿಸಲಾಗುತ್ತದೆ ಎಂದರು.