ಹಿರಿಯ ನಾಗರಿಕರ ಕೆಲಸವನ್ನ ಆದ್ಯತೆ ಮೇರೆಗೆ ಪರಿಗಣಿಸಿ: ಸರ್ಕಾರ ಸುತ್ತೋಲೆ
ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅವರ ಕೆಲಸಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು: ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅವರಿಗೆ ಗೌರವ ನೀಡಿ, ಅವರ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.
ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಇರುವುದು ಸಾಮಾನ್ಯ ವಿಚಾರವಾಗಿದೆ. ಕಚೇರಿಗಳಲ್ಲಿ ಅವರಿಗೆ ಕೂರಲು ಸರಿಯಾದ ಆಸನ ವ್ಯವಸ್ಥೆಯೂ ಇರುವುದಿಲ್ಲ. ಹಿರಿಯ ನಾಗರಿಕರು ತಮ್ಮ ಕೆಲಸಗಳಿಗಾಗಿ ಹಲವು ಬಾರಿ ಸರ್ಕಾರಿ ಕಚೇರಿಗೆ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಹಿರಿಯ ನಾಗರಿಕರಿಗೆ ಗೌರವ ನೀಡುವಂತೆ ಸೂಚನೆ ನೀಡಿದೆ.
ಹಿರಿಯ ನಾಗರಿಕರು ಕಚೇರಿಗೆ ಭೇಟಿ ನೀಡಿದಾಗ ಅವರಿಗೆ ಗೌರವ ನೀಡಿ, ಆಸನದ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಹಿರಿಯರು ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದು, ತಮ್ಮ ಕೆಲಸದ ನಿಮಿತ್ತ ಕಚೇರಿಗೆ ಭೇಟಿ ನೀಡುವ ಅವರುಗಳ ಮನವಿ, ಕೋರಿಕೆಗಳನ್ನು ಪರಿಗಣಿಸಿ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಅವರಿಗೆ ತಲುಪಿಸುವ ವ್ಯವಸ್ಥೆ ಮಾಡುವಂತೆಯೂ ಸರ್ಕಾರ ಸೂಚಿಸಿದೆ.