ಬೆಂಗಳೂರು:ಅಧಿವೇಶನ ವಿಸ್ತರಿಸಲು ಸರ್ಕಾರ ಒಪ್ಪದ ಕಾರಣ ಕಾಂಗ್ರೆಸ್ ಸದನ ಸಲಹಾ ಸಮಿತಿ ಸಭೆಯಿಂದ ಸಭಾತ್ಯಾಗ ಮಾಡಿದೆ.
ಸದನ ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಭಾಗವಹಿಸಿದ್ದೆವು. ನೆರೆ ಸಂಬಂಧ ವ್ಯಾಪಕ ಚರ್ಚೆ ನಡೆಸುವ ಅಗತ್ಯವಿದ್ದು, ಅಧಿವೇಶನವನ್ನು ಹತ್ತು ದಿನಗಳಿಗೆ ವಿಸ್ತರಿಸುವಂತೆ ಒತ್ತಾಯಿಸಿದೆವು. ಆದರೆ, ಸರ್ಕಾರ ಒಪ್ಪಲಿಲ್ಲ. ಆದ ಕಾರಣ ನಾವು ಸಭೆಯಿಂದ ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೆಡಿಎಸ್ ಸದನ ಸಲಹಾ ಸಮಿತಿಯೂ ಸಭೆಯನ್ನು ಬಹಿಷ್ಕರಿಸಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಬಗ್ಗೆ ನಿಯಮ 60ರಲ್ಲಿ ನಿಲುವಳಿ ಮಂಡಿಸಿದ್ದೇವೆ. ಸದನದಲ್ಲಿ ಎಲ್ಲಾ ಶಾಸಕರಿಗೆ ಚರ್ಚಿಸುವ ಅವಕಾಶ ನೀಡಬೇಕು. ಶಾಸಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಇರುವುದು ಇದೊಂದೇ ವೇದಿಕೆ. ಆದ್ದರಿಂದ ಅಧಿವೇಶನವನ್ನು 10 ದಿನಗಳವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬರಗಾಲ ಮತ್ತು ಪ್ರವಾಹ ಸಂಬಂಧ ಚರ್ಚೆ ನಡೆಸಲು ನಮ್ಮ ಮನವಿಗೆ ಸರ್ಕಾರ ಓಗೊಟ್ಟಿಲ್ಲ. ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿ ತದ್ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಕಾಂಗ್ರೆಸ್ 6 ತಂಡಗಳನ್ನು ರಚಿಸಿ ಸಂತ್ರಸ್ತರ ಅಹವಾಲು ಸ್ವೀಕರಿಸಿದೆ. ಶಾಸಕರಿಗೆ ನೀಡಲಾದ ಅನುದಾನ ಕಡಿತಗೊಳಿಸಲಾಗಿದೆ. ಈ ಬಗ್ಗೆ ಕಲಾಪದಲ್ಲಿ ಚರ್ಚಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.