ಬೆಂಗಳೂರು:ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವಹೇಳನಕಾರಿ ಪದ ಬಳಕೆ ಮಾಡಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ.
ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿ ಕಿಡಿಕಾರಿರುವ ಕಾಂಗ್ರೆಸ್ ಧರ್ಮ, ಸಂಸ್ಕೃತಿಗಳೆಲ್ಲವೂ ಬಿಜೆಪಿಗೆ ಬೂಟಾಟಿಕೆಯ ತೋರಿಕೆಗಳು ಮಾತ್ರ. ಸಂಜಯ್ ಪಾಟೀಲ್, ರಮೇಶ್ ಜಾರಕಿಹೊಳಿ ಅವರುಗಳು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಬಳಸುವ ಪದಗಳು ಬಿಜೆಪಿಯ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ’’ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ’’ ಎಂಬ ಮಾತಿನ ಅರ್ಥವನ್ನು ಬಿಜೆಪಿ ಮೊದಲು ತಿಳಿಯಲಿ ಎಂದಿದೆ.
ಬೆಳಗಾವಿ ಸ್ಥಳೀಯ ಸಂಸ್ಥೆ ಮೂಲಕ ವಿಧಾನ ಪರಿಷತ್ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಭಯ್ ಪಾಟೀಲ್ ಪರ ಪ್ರಚಾರದಲ್ಲಿ ತೊಡಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾಧ್ಯಮಗಳು ಲಕ್ಷ್ಮಿ ಹೆಬ್ಬಾಳ್ಕರ್ ಸಂಬಂಧ ಕೇಳಿದ ಪ್ರಶ್ನೆಗೆ ಅವಹೇಳನಕಾರಿಯಾಗಿ ಮಾತನಾಡಿ ತೆರಳಿದ್ದರು.
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಸೋದರ ಚನ್ನರಾಜ ಹಟ್ಟಿಹೊಳಿ ಚುನಾವಣಾ ಕಣದಲ್ಲಿದ್ದಾರೆ. ಈ ಹಿನ್ನೆಲೆ ಉಭಯ ನಾಯಕರ ನಡುವೆ ತೀವ್ರ ವಾಕ್ಸಮರ ನಡೆಯುತ್ತಿದೆ.
ಸರ್ಕಾರದ ವಿರುದ್ಧ ವಾಗ್ದಾಳಿ
ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನೀತಿ ಆಯೋಗದ ಬಡತನ ಸೂಚ್ಯಂಕದ ವರದಿಯಲ್ಲಿ ಕರ್ನಾಟಕದ ಯಾದಗಿರಿ ಜಿಲ್ಲೆ ಅತೀ ಬಡತನ ಹೊಂದಿರುವ ಅಂಶ ಬೆಳಕಿಗೆ ಬಂದಿದೆ. ಕಲಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅತಿ ಹಿಂದುಳಿದಿವೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ಕೊಡದ, ಉಸ್ತುವಾರಿ ಸಚಿವರನ್ನ ನೇಮಕ ಮಾಡದ ಈ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನೆ ಮಾಡಿದೆ.
ತಮ್ಮ ಸರ್ಕಾರದ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಅವಧಿಯ ಟೆಂಡರ್ಗಳನ್ನು ತನಿಖೆ ಮಾಡುತ್ತೇವೆ ಎನ್ನುತ್ತಾರೆ ಸಿಎಂ ಬೊಮ್ಮಾಯಿ. ಕಾಂಗ್ರೆಸ್ ಅವಧಿಯೂ ತನಿಖೆಯಾಗಲಿ. ಬಿಜೆಪಿ ಅವಧಿಯೂ ತನಿಖೆಯಾಗಲಿ. ಆದರೆ ನರಿಗಳು ನ್ಯಾಯ ಹೇಳುವಂತಾಗದೇ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಯಾಗಲಿ, ಶೇ 40ರಷ್ಟು ಲೂಟಿ ಮಾಡಿದ ಕಳ್ಳರು ಯಾರೆಂದು ತಿಳಿಯಲಿ ಕಾಂಗ್ರೆಸ್ ಸವಾಲು ಹಾಕಿದೆ.
ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಆಕ್ರೋಶ ಹೊರಹಾಕಿರುವ ಕಾಂಗ್ರೆಸ್, ರಾಜ್ಯದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಗೊಬ್ಬರದ ಕೊರತೆ, ಬೆಲೆ ಏರಿಕೆಯಿಂದ ದುಬಾರಿ ಕೃಷಿ, ಮಳೆಯಿಂದ ಬೆಳೆ ಹಾನಿ, ಈಗ ಅಳಿದುಳಿದ ಬೆಳೆಗಳಿಗೆ ರೋಗ ಬಾಧೆ. ನಿರಂತರ ಸಂಕಷ್ಟದಲ್ಲಿರುವ ರೈತರ ನೆರವಿಗೆ ಸಮರೋಪಾಧಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ 'ಕೃಷಿ ಸಚಿವರಿಗೆ ಫೋಟೋಶೂಟ್ ಚಿಂತೆ, ಸರ್ಕಾರಕ್ಕೆ 40ರಷ್ಟು ಕಮಿಷನ್ ಚಿಂತೆ'ಎಂದು ಲೇವಡಿ ಮಾಡಿದೆ.
ಒಟ್ಟಾರೆ ಸರ್ಕಾರ, ಸಚಿವರು, ಮಾಜಿ ಸಚಿವರ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ ಪ್ರಯೋಗಿಸಿದ್ದು, ಇದಕ್ಕೆ ಪಕ್ಷ ಹಾಗೂ ಬಿಜೆಪಿ ನಾಯಕರ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:ಬಿಜೆಪಿ, ಕಾಂಗ್ರೆಸ್ ನಡುವೆ ಪರ್ಸಂಟೇಜ್ ವಾರ್: 'ಪರ್ಸಂಟೇಜ್ ಸೀದಾರೂಪಯ್ಯ' ಎಂದು ಟೀಕಿಸಿದ ಬಿಜೆಪಿ