ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಟೀಕೆಗಳ ಸುರಿಮಳೆಗೈದಿದೆ. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ ಎಂದು ಸರಣಿ ಟ್ವೀಟ್ ಮಾಡಿ ಲೇವಡಿ ಮಾಡಿದೆ.
ರಾಜ್ಯ ಕಂಡ ಕಳಪೆ ಸರ್ಕಾರ ಇದು ಎನ್ನಲು ಒಂದಷ್ಟು ಪುರಾವೆಗಳು. 'ಸಚಿವರು ಕೆಲಸ ಮಾಡ್ತಿಲ್ಲ - ಸಿಎಂ ರಾಜಕೀಯ ಕಾರ್ಯದರ್ಶಿ', 'ಸಹಕಾರ ಸಚಿವರು ಕೆಲಸ ಮಾಡ್ತಿಲ್ಲ - ಮಾಧುಸ್ವಾಮಿ', 'ಕಾನೂನು ಸಚಿವರು ಕೆಲಸ ಮಾಡ್ತಿಲ್ಲ - ಎಸ್.ಟಿ ಸೋಮಶೇಖರ್', 'ಮಾಧುಸ್ವಾಮಿ ರಾಜೀನಾಮೆ ಕೊಡಲಿ - ಮುನಿರತ್ನ'.. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿವೆ ಎಂದು ಕಾಂಗ್ರೆಸ್ ಕುಟುಕಿದೆ.
ತಳ್ಳಿಕೊಂಡು ಹೋಗ್ತಿರುವ ಬಿಜೆಪಿ ಸರ್ಕಾರದಲ್ಲಿ ಎಂಎಂಎಸ್ಗಳು ಹೊರಬರುತ್ತಲೇ ಇರುತ್ತವೆ!. ಬಿಜೆಪಿ ನಾಯಕರ ಅಶ್ಲೀಲ ಚಿತ್ರಗಳ ಎಂಎಂಎಸ್ಗಳು ಒಂದೆಡೆಯಾದರೆ, ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟದಲ್ಲಿರುವ ಎಂಎಂಎಸ್ ಮತ್ತೊಂದೆಡೆ!. M-ಮುನಿರತ್ನ, M-ಮಾಧುಸ್ವಾಮಿ, S-ಸೋಮಶೇಖರ್. ಈ ಕಿತ್ತಾಟ ನಿಲ್ಲಿಸಲಾಗದೆ ಕೈಲಾಡುವ ಗೊಂಬೆಯಂತೆ 'ಮ್ಯಾನೇಜ್' ಮಾಡುತ್ತಿದ್ದಾರೆ ಸಿಎಂ ಎಂದೂ ಟೀಕಿಸಿದೆ.
ವಲಸಿಗರ ಕೈ ಮೇಲಾಯಿತೆ?:ರಾಜ್ಯದ ಇತಿಹಾಸದಲ್ಲೇ ಕ್ಯಾಬಿನೆಟ್ ಸಚಿವರಿಬ್ಬರು ಮತ್ತೊಬ್ಬ ಸಹೋದ್ಯೋಗಿ ಸಚಿವರ ರಾಜೀನಾಮೆ ಕೇಳುತ್ತಿರುವುದು ಇದೇ ಮೊದಲು. ಆ ಮಟ್ಟಿಗೆ ಈ ಸರ್ಕಾರದಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ ಮನೆಮಾಡಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಚಕಾರ ಎತ್ತದಿರುವುದು ತಮ್ಮ ಅಸಾಮರ್ಥ್ಯವನ್ನ ಒಪ್ಪಿದಂತೆ, ಅಲ್ಲವೇ ರಾಜ್ಯ ಬಿಜೆಪಿ ಎಂದು ವ್ಯಂಗ್ಯವಾಡಿದೆ.
ಸಚಿವ ಎಸ್.ಟಿ ಸೋಮಶೇಖರ್ ಬೆನ್ನಿಗೆ ನಿಂತು ಮಾಧುಸ್ವಾಮಿ ವಿರುದ್ಧ ಸಚಿವ ಮುನಿರತ್ನ ಬ್ಯಾಟಿಂಗ್ ಮಾಡುತ್ತಾರೆಂದರೆ ಬಿಜೆಪಿಯಲ್ಲಿ ಮೂಲದವರಿಗಿಂತ ವಲಸಿಗರ ಕೈ ಮೇಲಾಯಿತೆ?. ಹೊಸ ಬಿಜೆಪಿಗರು ಹಳೇ ಬಿಜೆಪಿಗರ ರಾಜೀನಾಮೆ ಕೇಳುತ್ತಿದ್ದಾರೆ ಎಂದರೆ ವಲಸಿಗರ ಮುಂದೆ ರಾಜ್ಯ ಬಿಜೆಪಿ ಮಂಡಿಯೂರಿ ಶರಣಾಗಿದೆ ಎಂದರ್ಥವಲ್ಲವೇ ಎಂದು ಪ್ರಶ್ನಿಸಿದೆ.
ಆರಗ ಜ್ಞಾನೇಂದ್ರ ವಿರುದ್ಧ ಟೀಕೆ:ಗೃಹ ಸಚಿವರಿಗೆ ಬೂಟು ಹಾಕಿಕೊಳ್ಳಲು ಗಾಂಧಿ ಆಸರೆಯೇ?. ಮಹಾತ್ಮ ಗಾಂಧಿಯವರಿಗೆ ಈ ರೀತಿಯಲ್ಲಿ ಅವಮಾನಿಸುವ ನಿರ್ದೇಶನ ನಾಗಪುರದಿಂದ ಬಂದಿತ್ತೇ ಆರಗ ಜ್ಞಾನೇಂದ್ರ ಅವರೇ?. ಕಾನೂನು ಸುವ್ಯವಸ್ಥೆ ನಿರ್ವಹಿಸುವುದನ್ನೂ ತಿಳಿಯದ, ಮಹನೀಯರಿಗೆ ಗೌರವಿಸುವುದನ್ನೂ ಅರಿಯದ ಸಚಿವರು, ದೇಶಭಕ್ತಿಯ ಬಗ್ಗೆ ಭಾಷಣ ಬಿಗಿಯುವುದು ಹಾಸ್ಯಾಸ್ಪದ. ನಕಲಿ ದೇಶಭಕ್ತ ಎಂದು ಲೇವಡಿ ಮಾಡಿದೆ.
ಗೃಹಸಚಿವರ ತವರು ಜಿಲ್ಲೆಯಲ್ಲೇ ನಿರಂತರವಾಗಿ ಗಲಭೆ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕನಿಷ್ಠ ಪ್ರಯತ್ನ ಮಾಡದಿರುವುದು ಸಚಿವರ ಅಸಾಮರ್ಥ್ಯವೋ ಅಥವಾ ಕೋಮು ಕಲಹಕ್ಕೆ ನೀಡುತ್ತಿರುವ ಉದ್ದೇಶಪೂರ್ವಕ ಕುಮ್ಮಕ್ಕೊ? ಬಿಜೆಪಿ ಶಿವಮೊಗ್ಗದಲ್ಲಿ ಕೋಮು ರಾಜಕೀಯದ ಪ್ರಯೋಗಶಾಲೆಯ ಬ್ರಾಂಚ್ ತೆರೆದಿರುವಂತಿದೆ ಎಂದು ಕಾಂಗ್ರೆಸ್ ದೂರಿದೆ.
ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಶೇ.40ರಷ್ಟು ಕಮಿಷನ್ ಸರ್ಕಾರ ಐಸಿಯುನಲ್ಲಿ ವೆಂಟಿಲೇಟರ್‌ನ ಕೃತಕ ಉಸಿರಾಟದಲ್ಲಿದೆ. ಇನ್ನು ಎಂಟು ತಿಂಗಳು ಹೇಗಾದರೂ ಮಾಡಿ ಉಸಿರು ಉಳಿಸಿಕೊಳ್ಳುವ 'ತಳ್ಳಾಟ'ದಲ್ಲಿದೆ ಸರ್ಕಾರ ಎನ್ನುವುದು ಮಾಧುಸ್ವಾಮಿಯವರ ಮಾತಿನ ಅರ್ಥ ಅಲ್ಲವೇ ರಾಜ್ಯ ಬಿಜೆಪಿ?. ಸೋಲಿನ ಹತಾಶೆಯಲ್ಲಿರುವ ಬಿಜೆಪಿಯ ಬಿಜೆಪಿ ವರ್ಸಸ್ ಬಿಜೆಪಿ ಕಲಹ ಇನ್ನಷ್ಟು ರಂಗೇರಲಿದೆ ಎಂದು ಗೇಲಿ ಮಾಡಿದೆ.
ಇದನ್ನೂ ಓದಿ:ದೇಶಕ್ಕಾಗಿ ಸಾವರ್ಕರ್ ಹೋರಾಡಿದ್ದಾರೆ, ಕಾಂಗ್ರೆಸ್ ಮನೆ ದೀಪಕ್ಕೆ ದಿಕ್ಕಿಲ್ಲದಂತಾಗುತ್ತದೆ: ಕಾರಜೋಳ