ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕಸರತ್ತು ಹಾಗೂ ದಿಲ್ಲಿ ಪ್ರವಾಸದ ಮಧ್ಯೆ ಸಿಎಂ ನೆರೆ ಸಂತ್ರಸ್ತರನ್ನ ಮರೆತಿದ್ದಾರೆಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ. ಬಿಜೆಪಿಯ ಮ್ಯಾನೇಜ್ಮೆಂಟ್ ಸರ್ಕಾರದಲ್ಲಿ ಸಿಎಂ ಒಂದೇ ವರ್ಷದ ಅವಧಿಯಲ್ಲಿ 12 ಬಾರಿ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗಲಿಲ್ಲ, ಸಿಎಂ ಸಂಪುಟ ಸರ್ಜರಿಗೆ ಕಸರತ್ತು ನಡೆಸುತ್ತಿದ್ದರೆ, ಸ್ಥಾನ ವಂಚಿತರು ಸಿಎಂ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದಾರೆಯೇ? ಇಷ್ಟು ಬೇಗ ನೆರೆ ಸಂತ್ರಸ್ತರನ್ನು ಮರೆಯಿತೇ ಸರ್ಕಾರ? ಎಂದು ಕಾಂಗ್ರೆಸ್ ಕೇಳಿದೆ.
ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ. ಆದರೆ, ಬಿಜೆಪಿ ಭ್ರಷ್ಟೋತ್ಸವ ಮಾತ್ರ ಅಡೆತಡೆಯಿಲ್ಲದೇ ಸಾಗುತ್ತಿದೆ. ಮಾಧುಸ್ವಾಮಿ ಅವರ ರಾಜೀನಾಮೆ ಕೇಳಿದ ಸಚಿವ ಎಸ್ ಟಿ ಸೋಮಶೇಖರ್ ಅವರ ಅಕ್ರಮದ ವಿರುದ್ಧ ಪ್ರಧಾನಿಗೆ ಪತ್ರ ಬರೆಯಲಾಗಿದೆ. ಈಗ ಯಾರ ರಾಜೀನಾಮೆ ಪಡೆಯುವಿರಿ ಬಸವರಾಜ ಬೊಮ್ಮಾಯಿ ಅವರೇ? ಮಾಧುಸ್ವಾಮಿಯವರದ್ದೋ, ಸೋಮಶೇಖರ್‌ರದ್ದೋ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯ ಸಂಸದೀಯ ಸಮಿತಿಗೆ ಬಿಎಸ್ ಯಡಿಯೂರಪ್ಪ ನೇಮಕ: ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಯ ಸಂಸದೀಯ ಸಮಿತಿಗೆ ಕಳಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಬಿಎಸ್ವೈ ಮುಕ್ತ ಮಾಡುವಲ್ಲಿ ಯಶಸ್ವಿ ಹೆಜ್ಜೆಯನ್ನಿಟ್ಟಿದೆ 'ಸಂತೋಷ ಕೂಟ'. ಬಿಎಸ್ವೈ ಅವರೀಗ ಅಧಿಕೃತವಾಗಿ 'ಮಾರ್ಗದರ್ಶಕ ಮಂಡಳಿ' ಸೇರಿದಂತಾಯಿತು.
ಅವರನ್ನು ಮುಗಿಸಿಹಾಕುವ ಡಿಮೋಷನ್ ಕೊಟ್ಟು ಪ್ರಮೋಷನ್ ಎಂಬಂತೆ ಬಿಂಬಿಸುತ್ತಿದೆ ಬಿಜೆಪಿ. ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ ಉತ್ಸವವನ್ನು ಕಂಡ ಬಸವರಾಜ ಬೊಮ್ಮಾಯಿ ಅವರು ಜನೋತ್ಸವ ಮಾಡಲು ಹೆದರಿದ್ದಾರೆ. ಬಿಜೆಪಿಯೊಳಗೆ 'ಕಲಹೋತ್ಸವ' ನಡೆಯುತ್ತಿರುವಾಗ, ಬೊಮ್ಮಾಯಿ ಅವರು 'ಆತಂಕೋತ್ಸವ' ಎದುರಿಸುತ್ತಿರುವಾಗ, ಸರ್ಕಾರದಲ್ಲಿ ಬಿಜೆಪಿ ಭ್ರಷ್ಟೋತ್ಸವ ನಡೆಯುತ್ತಿರುವಾಗ, ಜನರು ಬರುವುದುಂಟೇ, ಜನೋತ್ಸವ ನಡೆಯುವುದುಂಟೇ ಎಂದು ಕಾಂಗ್ರೆಸ್ ಪಕ್ಷ ಕೈಗೊಂಬೆ ಮುಖ್ಯಮಂತ್ರಿ ಎಂಬ ಟ್ಯಾಗ್ ಲೈನ್ ಅಡಿ ಲೇವಡಿ ಮಾಡಿದೆ.
ಮತ್ತೊಮ್ಮೆ ಜನೋತ್ಸವ ಮುಂದೂಡಲಾಗಿದೆಯಂತೆ. ಬಿಜೆಪಿ ಭ್ರಷ್ಟೋತ್ಸವ ಮಾಡುತ್ತಿರುವ ಸಿಎಂ ಬೊಮ್ಮಾಯಿಯವರಿಗೆ ಜನೋತ್ಸವ ಮಾಡುವ ಶಕ್ತಿಯೂ ಇರಲಿಲ್ಲ, ಈಗ ಯೋಗವೂ ಇಲ್ಲ ಎಂದೆನಿಸುತ್ತದೆ. ಸುರೇಶ್ ಗೌಡರ 'ಸಿಎಂ ಬದಲಾವಣೆ' ಹೇಳಿಕೆಗೂ, ಮುಂದಿನ ಸಿಎಂ ನಿರಾಣಿ ಎಂಬ ಪೋಸ್ಟರ್‌ಗೂ ಹಾಗೂ ಜನೋತ್ಸವದ ಮುಂದೂಡಿಕೆಗೂ ಸಂಬಂಧವಿದೆಯೇ ರಾಜ್ಯ ಬಿಜೆಪಿ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮಾಣಿಕ್ ಷಾ ಮೈದಾನದಲ್ಲಿ ಎರಡು ದ್ವಾರಗಳಿಗೆ ಇದ್ದ ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್ ಹೆಸರುಗಳನ್ನು ಅಳಿಸಲಾಗಿದೆ. ಧ್ವಜಾರೋಹಣಕ್ಕೂ ಮೊದಲಿದ್ದ ಹೆಸರುಗಳನ್ನು ಅಳಿಸಿ ಹಾಕಿದ್ದೇಕೆ ಬಸವರಾಜ ಬೊಮ್ಮಾಯಿ ಅವ್ರೇ? ರಾಜ್ಯದ ಮಹನೀಯರ ಏಕಿಷ್ಟು ಅಸಹನೆ? ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವನಿಗಿರುವ ಪ್ರಾಮುಖ್ಯತೆ ರಾಜ್ಯದ ಹೋರಾಟಗಾರರಿಗೆ ಏಕಿಲ್ಲ? ಎಂದು ಪ್ರಶ್ನಿಸಿದೆ.
(ಇದನ್ನೂ ಓದಿ: ವರ್ಷದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಕೇಂದ್ರವಾದ ಕಾವೇರಿ: ಬಿಎಸ್ವೈ ನಿವಾಸಕ್ಕೆ ದೌಡಾಯಿಸಿದ ಬಿಜೆಪಿ ಮುಖಂಡರು)