ಬೆಂಗಳೂರು: ಕೋವಿಡ್ ಲಸಿಕೆ ವಿಚಾರವಾಗಿ ಬಿಜೆಪಿ ತಮ್ಮ ವಿರುದ್ಧ ಮಾಡಿರುವ ಟೀಕೆಗೆ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ಪಕ್ಷದ ವಿರುದ್ಧ ಟ್ವೀಟ್ ಮಾಡಿದ್ದ ಬಿಜೆಪಿ, ಭಾರತದಲ್ಲಿ ನಿರ್ಮಿತವಾದ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಆರೋಗ್ಯ ತಜ್ಞರು ಖಚಿತ ಪಡಿಸಿದ್ದಾರೆ. ಲಸಿಕೆಯ ವಿಚಾರದಲ್ಲಿ ರಾಜಕಾರಣ ಮಾಡಿ, ಜನರಲ್ಲಿ ಭೀತಿ ಹುಟ್ಟಿಸಿದ್ದ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಕ್ಷಮೆ ಕೇಳಲಿ ಎಂದು ಆಗ್ರಹಿಸಿತ್ತು.
ಇದಕ್ಕೆ ಪ್ರತಿಯಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಬಿಜೆಪಿ ಪಕ್ಷ ಮೊದಲು ಪಡೆದು ಧೈರ್ಯ ತುಂಬಬೇಕಾದ ಪ್ರಧಾನಿ ಹಲವು ದಿನದವರೆಗೂ ಪಡೆಯದಿರುವುದರಿಂದಲೇ ಜನತೆಗೆ ಲಸಿಕೆಯ ಬಗ್ಗೆ ಅಪನಂಬಿಕೆ ಹುಟ್ಟಿದ್ದು ಎಂದಿದೆ.
ಲಸಿಕೆ ಇಲ್ಲದೆಯೇ ಕೊರೊನಾ ಗೆದ್ದಿದ್ದೇವೆ ಎನ್ನುವ ಮೂಲಕ ತಾತ್ಸಾರ ಹುಟ್ಟಿಸಿದ್ದೇ ಪ್ರಧಾನಿ. ಲಸಿಕೆ ಬದಲು ಗೋಮೂತ್ರದ ಕತೆ ಹೇಳಿ ಜನತೆಗೆ ಅವೈಜ್ಞಾನಿಕ ಸಲಹೆ ನೀಡಿದ್ದು ನೀವಲ್ಲವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಆರ್ಥಿಕತೆಯಲ್ಲಿ ಹಾಗೂ ಕೊರೊನಾ ನಿರ್ವಹಣೆಯಲ್ಲಿ ನೆರೆಹೊರೆಯ ಸಣ್ಣಪುಟ್ಟ ದೇಶಗಳಾದ ನೇಪಾಳ, ಶ್ರೀಲಂಕಾ, ಮಯನ್ಮಾರ್, ಪಾಕಿಸ್ತಾನ, ಬಾಂಗ್ಲಾದೇಶಗಳಿಗಿಂತಲೂ ಭಾರತ ಕಳಪೆಯಾಗಲು ನರೇಂದ್ರ ಮೋದಿ ಆಡಳಿತವೇ ಬರಬೇಕಾಯ್ತು! ಮೋದಿಯವರ ಗಡ್ಡ ಬೆಳೆದಂತೆ ದೇಶದ ಬಡತನವೂ ಎಲ್ಲೆ ಮೀರಿ ಬೆಳೆಯುತ್ತಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ರಾಜ್ಯ ಸರ್ಕಾರಕ್ಕೂ ತರಾಟೆ
ರಾಜ್ಯದಲ್ಲಿ ಮತ್ತೊಂದು ಸವಾಲು ಎಂಬಂತೆ ಕಪ್ಪು ಶಿಲೀಂದ್ರ ಸೋಂಕು ಹೆಚ್ಚುತ್ತಿದೆ. ಈವರೆಗೂ ಸರ್ಕಾರ ಈ ಸೋಂಕಿನ ಬಗ್ಗೆ ಚರ್ಚಿಸಿಲ್ಲ, ಎಷ್ಟು ಸೋಂಕಿತರಿದ್ದಾರೆ ಎಂದು ಮಾಹಿತಿ ಪಡೆದಿಲ್ಲ, ಅಂಪೋಟೆರಿಸಿನ್ ಬಿ ಬೇಡಿಕೆಯ ಅಂಕಿಸಂಖ್ಯೆಯ ಮಾಹಿತಿ ಪಡೆದಿಲ್ಲ. 1000ಕ್ಕೂ ಹೆಚ್ಚು ಪ್ರಕರಣವಿರುವ ಅಂದಾಜಿದೆ. 1,270 ವಯಲ್ಸ್ ಸಾಕೇ ಆರೋಗ್ಯ ಸಚಿವ ಸುಧಾಕರ್ ಅವರೇ? ಎಂದು ಕೇಳಿದೆ.
ಇದನ್ನೂ ಓದಿ:ಚಾಮರಾಜನಗರ ದುರಂತ.. ಮೃತ ಕುಟುಂಬಸ್ಥರಿಗೆ ತಲಾ ₹2 ಲಕ್ಷ ಪರಿಹಾರ ಮಂಜೂರು
ಬಿಜೆಪಿಗೆ ಆಡಳಿತ ನಡೆಸುವ ಯೋಗ್ಯತೆ ಇಲ್ಲ ಎಂದು ತಾವೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಕೆಲಸ ಮಾಡುವ ಬದಲು ಕಣ್ಣೀರು ಸುರಿಸುತ್ತಾರೆ. ನೇಣು ಹಾಕ್ಕೋಬೇಕೇ ಎಂದು ಕೇಳುತ್ತಾರೆ. ನೋಟ್ ಪ್ರಿಂಟ್ ಮಾಡ್ತಿಲ್ಲ ಅಂತಾರೆ. ವಿವಿಧ ಬಗೆಯಲ್ಲಿ ಹತಾಶೆ ವ್ಯಕ್ತಪಡಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಅಂಟಿ ಕುಳಿತಿದ್ದಾದರೂ ಏಕೆ? ಎಂದು ಕಾಂಗ್ರೆಸ್ ಪ್ರಶ್ನೆ ಹಾಕಿದೆ.
ನಿಮಗೇಕೆ ಆ ಹುದ್ದೆ?
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರೇ, ನೀವು ಕರ್ನಾಟಕದವರೇ, ಫಾರ್ಮಾಸುಟಿಕಲ್ಸ್ ನಿಮ್ಮದೇ ಖಾತೆ, ಔಷಧ ಪೂರೈಕೆಯ ಅಧಿಕಾರ ನಿಮಗಿದೆ. ಹೀಗಿದ್ದೂ "ಸಾಧ್ಯವಾಗಿಲ್ಲ" ಎಂಬ ಹತಾಶೆಯ ಮಾತಾಡುತ್ತಿದ್ದೀರಲ್ಲ ರಾಜ್ಯದ ಸೋಂಕಿತರು ನೇಣು ಹಾಕಿಕೊಳ್ಬೇಕಾ?! ಲಸಿಕೆ ನೀಡಲೂ ಆಗಲಿಲ್ಲ, ಈಗ ಶಿಲಿಂಧ್ರ ಸೋಂಕಿಗೆ ಔಷಧ ನೀಡಲೂ ನಿಮ್ಮ ಕೈಲಾಗುತ್ತಿಲ್ಲ ನಿಮಗೇಕೆ ಆ ಹುದ್ದೆ? ಎಂದು ನೇರವಾಗಿ ಕೇಳಿದೆ.
ತೌಕ್ತೆ ಚಂಡಮಾರುತಕ್ಕೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ನಲುಗಿದ್ದವು. ಮೋದಿಯವರು ಕ್ಷಣವೂ ತಡಮಾಡದೆ ಗುಜರಾತಿಗೆ ತೆರಳಿ, ಸಮೀಕ್ಷೆ ನಡೆಸಿ 1000 ಕೋಟಿ ಕೊಟ್ಟೇಬಿಟ್ಟರು. ಕರ್ನಾಟಕಕ್ಕೆ 2 ಬಾರಿ ನೆರೆ ಬಂದಾಗ ಪ್ರಧಾನಿಯೂ ಬರಲಿಲ್ಲ, ಪರಿಹಾರವೂ ಬರಲಿಲ್ಲ. ಮುತ್ತು ಮಾಣಿಕ್ಯದಂತಹ 25 ಸಂಸದರು ಈ ತಾರತಮ್ಯವನ್ನು ಪ್ರಶ್ನಿಸುವುದಿಲ್ಲವೇ?! ಎಂದು ಸಂಸದರನ್ನು ಖಾರವಾಗಿ ಪ್ರಶ್ನಿಸಿದೆ.
ಬಿಎಸ್ ಯಡಿಯೂರಪ್ಪ ಅವರೇ, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮುಂದುವರೆಸಿದ್ದೀರಿ, ಇರಲಿ. ಲಾಕ್‌ಡೌನ್ ಅವಧಿಯನ್ನು ಯಾವ ಕಾರ್ಯಕ್ಕೆ ಮೀಸಲಿರಿಸಿದ್ದೀರಿ? ಈವರೆಗಿನ ಲಾಕ್‌ಡೌನ್ ಅವಧಿಯಲ್ಲಿ ವೈದ್ಯಕೀಯ ವ್ಯವಸ್ಥೆಗಳ ಪ್ರಗತಿ ಏನು? ಈ ಅವಧಿಯಲ್ಲಿ ಯಾವ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ? ಆರ್ಥಿಕ ಚೇತರಿಕೆಗೆ ಕಾರ್ಯತಂತ್ರವೇನು? ಎಂಬ ಪ್ರಶ್ನೆಗಳ ಸುರಿಮಳೆಗೈದಿದೆ. ಇದಕ್ಕೆಲ್ಲ ಬಿಜೆಪಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ.