ಬೆಂಗಳೂರು: ಕೇಂದ್ರ ಸರ್ಕಾರದ ದುರಾಡಳಿತ ಹಾಗೂ ಕೆಟ್ಟ ನಡವಳಿಕೆಗಳಲ್ಲಿ ಈಗ ಗೂಢಚಾರಿಕೆಯೂ ಸೇರಿಕೊಂಡಿರುವುದು ವಿಪರ್ಯಾಸ ಎಂದು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.
ಟ್ವೀಟ್ ಮೂಲಕ ತನ್ನ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್, ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ದೇಶ, ದೇಶದ ಜನ ಅಭದ್ರತೆಯಲ್ಲಿರುವುದಷ್ಟೇ ಅಲ್ಲ. ನ್ಯಾಯಾಧೀಶರು, ಪತ್ರಕರ್ತರು, ವಿಪಕ್ಷ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿಜ್ಞಾನಿಗಳ ಗೌಪ್ಯ ಮಾಹಿತಿಗಳೂ ಅಪಾಯದಲ್ಲಿವೆ. ಈ ಮೊದಲು ಯುವತಿಯ ಹಿಂದೆ ಬಿದ್ದು ಸ್ನೂಪ್‌ಗೇಟ್ ಹಗರಣ ನಡೆಸಿದ ಜೋಡಿ ಇಂದು 300 ಜನರ ಗೂಢಾಚಾರಿಕೆ ನಡೆಸಿದೆ ಎಂದಿದೆ.
ಬಿಜೆಪಿ ಪಕ್ಷವನ್ನು ಭಾರತೀಯ ಜಾಸೂಸ್ ಪಾರ್ಟಿ ಎಂದು ಸಂಬೋಧಿಸಿರುವ ಕಾಂಗ್ರೆಸ್, ಖಾಸಗೀತನ ಭಾರತೀಯರ ಸಾಂವಿಧಾನಿಕ ಹಕ್ಕು. ಆದರೆ ರಾಷ್ಟ್ರೀಯ ಬಿಜೆಪಿ ಸರ್ಕಾರ ನ್ಯಾಯಾಧೀಶರು, ರಕ್ಷಣಾ ಅಧಿಕಾರಿಗಳು, ವಿಪಕ್ಷ ನಾಯಕರು ಸೇರಿದಂತೆ ದೇಶದ ಪ್ರಮುಖ ವ್ಯಕ್ತಿಗಳ ಫೋನ್‌ಗಳನ್ನು ಕದ್ದು ನೋಡುತ್ತಿರುವುದೇಕೆ? ವಿದೇಶಿ ಗೂಢಾಚಾರಿಕೆ ಸಾಫ್ಟವೇರ್ ಬಳಸಿ ದೇಶದ ಭದ್ರತೆಯ ವಿಚಾರದಲ್ಲಿ ಆಟವಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ. (ರಾಹುಲ್ ಗಾಂಧಿ, ಪ್ರಶಾಂಕ್ ಕಿಶೋರ್ ಫೋನ್ ನಂಬರ್‌ಗಳೂ ಹ್ಯಾಕ್?)
ಕೋವಿಡ್ ಸಾವಿನ ಸಂಖ್ಯೆ, ಸಂಕಷ್ಟಕ್ಕೆ ಸಿಲುಕಿದ ವಲಸೆ ಕಾರ್ಮಿಕರು, ನಿರುದ್ಯೋಗಿಗಳು, ಪಿಎಂ ಕೇರ್ಸ್, ರಾಷ್ಟ್ರೀಯ ಬಿಜೆಪಿ ಸರ್ಕಾರದ ಬಳಿ ಈ ಯಾವ ಅಂಕಿ ಅಂಶವೂ ಇಲ್ಲ. ನೀವು ಯಾರೊಂದಿಗೆ ಮಾತನಾಡುತ್ತೀರಿ, ಯಾರಿಗೆ ಮೆಸೇಜ್ ಕಳುಹಿಸುತ್ತೀರಿ, ಏನು ನೋಡುತ್ತೀರಿ ಎಂಬ ಮಾಹಿತಿ ಪಡೆಯುವಲ್ಲಿ ಅವರು ಮಗ್ನರಾಗಿದ್ದಾರೆ ಎಂದು ಲೇವಡಿ ಮಾಡಿದೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗೂಢಾಚಾರಿಕೆ ನಡೆಸಿದ್ದನ್ನು ಒಪ್ಪಿಕೊಂಡಂತಾಗಿದೆ. ಎಲ್ಲವೂ ತಮ್ಮ ಹಿಡಿತದಲ್ಲಿರಬೇಕೆಂದು ಸರ್ವಾಧಿಕಾರಿ ಜೋಡಿ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಫೋನ್ ಕದ್ದು ನೋಡುತ್ತಾರೆಂದರೆ ಆ ಜೋಡಿ ಎಷ್ಟು ಅಭದ್ರತೆಯಲ್ಲಿರಬಹುದು!? ಎಷ್ಟಾದರೂ ಕದ್ದು ನೋಡುವುದು ಅವರ ಹಳೆಯ ಚಾಳಿ ಅಲ್ಲವೇ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.