ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಹಬ್ಬಿರುವ ವದಂತಿ ಹಿನ್ನೆಲೆ ಸರ್ಕಾರವನ್ನು ಲೇವಡಿ ಮಾಡಿ ಕಾಂಗ್ರೆಸ್ ತನ್ನ ಸರಣಿ ಟ್ವೀಟ್ ಮುಂದುವರಿಸಿದೆ. ರಾಜ್ಯದಲ್ಲಿ 3ನೇ ಸಿಎಂ ಆಯ್ಕೆಗೆ ಬಿಜೆಪಿಯಿಂದ ಕಸರತ್ತು ನಡೆದಿದೆ ಎಂದು ಆರೋಪಿಸಿ ನಿನ್ನೆ ಸರಣಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಇಂದು ಸಹ ಮುಂದುವರಿಸಿದೆ.
ಯಡಿಯೂರಪ್ಪ ಅವರನ್ನು ಸರ್ಕಾರದ 2ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸುವ ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಸಿಎಂಗೆ ಸಂಪುಟ ಸಂಕಟ ಬಗೆಹರಿಸಲಾಗದ್ದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಬಿಜೆಪಿ ಹೈಕಮಾಂಡ್ಗೆ ಕರ್ನಾಟಕದ ಸಿಎಂಗಳೆಂದರೆ ಕೈಗೊಂಬೆ ಸಿಎಂ ಇದ್ದಹಾಗೆ. ಅಡಿಸಿಯೂ ನೋಡುತ್ತಾರೆ, ಬೀಳಿಸಿಯೂ ನೋಡುತ್ತಾರೆ. ಬಿ.ಎಸ್ ಯಡಿಯೂರಪ್ಪ ಅವರಂತಹ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ಬೊಂಬೆ ಬಸವರಾಜ ಬೊಮ್ಮಾಯಿ ಅವರು ಯಾವ ಲೆಕ್ಕ. 'ಸಂತೋಷ ಕೂಟ'ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ ಎಂದಿದೆ.
ಸಿದ್ದರಾಮಯ್ಯನವರ ಅಮೃತ ಮಹೋತ್ಸವದಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಅಭೂತಪೂರ್ವ ಜನಬೆಂಬಲ, ಕಾಂಗ್ರೆಸ್ ಆಯೋಜಿಸಿರುವ ಸ್ವಾತಂತ್ರ್ಯೋತ್ಸವ ನಡಿಗೆಗೆ ಸಿಗುತ್ತಿರುವ ಅಪರಿಮಿತ ಯಶಸ್ಸನ್ನು ಕಂಡ ಬಿಜೆಪಿ ಕಂಗಾಲಾಗಿ ಹೋಗಿದೆ. ಚುನಾವಣೆಗೆ ಹೋಗಲು ಮುಖವಿಲ್ಲದ ಕಾರಣ ಸಿಎಂ ಕುರ್ಚಿಯಲ್ಲಿ ಬೇರೆ ಕೈಗೊಂಬೆ ಸಿಎಂ ಕೂರಿಸಲು ಕಸರತ್ತು ನಡೆಸುತ್ತಿದೆ ರಾಜ್ಯ ಬಿಜೆಪಿ. ಬೊಮ್ಮಾಯಿಯವರ ಆಡಳಿತದಲ್ಲಿ 'ಆ್ಯಕ್ಷನ್' ಇಲ್ಲದಕ್ಕೆ ಸಿಎಂ ಬದಲಾವಣೆಯ 'ರಿಯಾಕ್ಷನ್' ಸೃಷ್ಟಿಯಾಗಿದೆ.