ಬೆಂಗಳೂರು:ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಆರ್ಎಸ್ಎಸ್ ಜಗಳ ಜೋರಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಸಂಘಟನೆಯ ಮೂಲವನ್ನು ಕೆದಕಿದರೆ, ಇಂದು ಪಕ್ಷದ ಅಧಿಕೃತ ಟ್ವಿಟ್ಟರ್ನಲ್ಲಿ ಸರಣಿ ಟ್ವೀಟ್ ಮಾಡಿ ಆರ್ಎಸ್ಎಸ್ ದೇಶಪ್ರೇಮಿ ಸಂಘಟನೆಯಲ್ಲ, ಅದೊಂದು ಸಪುಂಸಕ ಸಂಘಟನೆ ಎಂದು ಕಟು ಪದಗಳಲ್ಲಿ ಟೀಕಿಸಿದೆ.
ದೇಶದ ರಾಷ್ಟ್ರಧ್ವಜಕ್ಕೆ ಬೆಲೆ ಕೊಡದೆ ಅವಮಾನಿಸುವ, ಈ ದೇಶ ಕಂಡ ಮಹಾದಾರ್ಶನಿಕ ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರ್ಎಸ್ಎಸ್ ಈ ದೇಶದ ಸಪುಂಸಕ ಸಂಘಟನೆಯೇ ಹೊರತಾಗಿ ಯಾವುದೇ ಕಾರಣಕ್ಕೂ ದೇಶಪ್ರೇಮಿ ಸಂಘಟನೆಯಾಗಲಾರದು ಎಂಬುದಕ್ಕೆ ನಿದರ್ಶನಗಳಿವೆ ಎಂದು ವಿವಿಧ ಅಂಶಗಳಲ್ಲಿ ಮಾಹಿತಿಯನ್ನು ಕಾಂಗ್ರೆಸ್ ಪಕ್ಷ ನೀಡಿದೆ.
1929 ರ ಲಾಹೋರ್ ಅಧಿವೇಶನದಲ್ಲಿ ಅಂದಿನ ಅಧ್ಯಕ್ಷರಾದ ಜವಾಹರಲಾಲ್ ನೆಹರೂರವರು ದೇಶದ ಎಲ್ಲಾ ಸಂಸ್ಥೆಗಳ ಮೇಲೆ 1930 ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಬೇಕೆಂದು ಕರೆ ಕೊಡುತ್ತಾರೆ. ಇದನ್ನು ನಿರಾಕರಿಸಿದ ಆರ್ಎಸ್ಎಸ್ ತನ್ನ ಸಂಘದ ಕಚೇರಿಯ ಮೇಲೆ ಭಗವಾಧ್ವಜ ಹಾರಿಸುತ್ತದೆ. ಹೆಜ್ಜೆ ಹೆಜ್ಜೆಗೂ ಈ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹೀಗಳೆಯುತ್ತಾ ಬ್ರಿಟಿಷರ ಸೈನ್ಯ ಸೇರಲು ಆರ್ಎಸ್ಎಸ್ ತುದಿಗಾಲಲ್ಲಿ ನಿಂತಿರಲಿಲ್ಲವೇ? ಈ ದೇಶದ ಸ್ವಾತಂತ್ರ್ಯಕ್ಕೆ ನಯಾಪೈಸೆ ಕೊಡುಗೆ ಕೊಡದ, ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಿದ್ದ ಆರ್ಎಸ್ಎಸ್ ಸಂಘಟನೆ ದೇಶದ್ರೋಹಿ ಸಂಘಟನೆಯಲ್ಲದೆ ಮತ್ತಿನ್ನೇನು? ಎಂದು ಪ್ರಶ್ನಿಸಿದೆ.
ಗಾಂಧಿ ಮರಣ ಸಿಹಿ ಹಂಚಿದ್ದ ಸಂಘಟನೆ:ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಬಾಪೂಜಿ ಮಹಾತ್ಮ ಗಾಂಧಿಯವರು ಹತ್ಯೆಯಾದ ದಿನ ಸಿಹಿ ಹಂಚಿದ ಗುಳ್ಳೆನರಿ ಆರ್ಎಸ್ಎಸ್ ಹೇಗೆ ತಾನೇ ದೇಶಪ್ರೇಮಿ ಸಂಘಟನೆಯಾಗಬಲ್ಲದು? ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ 1970 ಜನವರಿ 11 ರಂದು ತನ್ನ ಸಂಪಾದಕೀಯದಲ್ಲಿ ಗಾಂಧಿಯವರ ಬಗ್ಗೆ ವಿಷಪೂರಿತ ಲೇಖನ ಪ್ರಕಟಿಸಿರಲಿಲ್ಲವೇ? ನಾವು ಮೂರು ಜನ ಸಹೋದರರು ಅಂದರೆ ನಾಥೂರಾಮ, ನಾನು, ದತ್ತಾತ್ರೇಯ. ನಾವು ಮನೆಯಲ್ಲಿ ಬೆಳೆದೆವು ಎಂಬುದಕ್ಕಿಂತ ಆರ್ಎಸ್ಎಸ್ ಸಂಘಟನೆಯಲ್ಲೇ ಬೆಳೆದವು ಎಂದು ಹೇಳಬಹುದು. ಇದು ಗೋಪಾಲ ಗೋಡ್ಸೆಯ ಮಾತುಗಳು ಎಂದಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದಂಥಹ ಈ ದೇಶದ ಮೊದಲ ಭಯೋತ್ಪಾದಕ ಗೋಡ್ಸೆ ತಯಾರಾಗಿದ್ದು ಸಹ ಇದೇ ಆರ್ಎಸ್ಎಸ್ ಗರಡಿಯಲ್ಲೇ. ಈ ಬಗ್ಗೆ ನಾಥೂರಾಮ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಜನವರಿ 28, 1994ರಲ್ಲಿ ಫ್ರಂಟ್ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಖಚಿತಪಡಿಸಿದ್ದಾರೆ. ಅಷ್ಟೇ ಅಲ್ಲದೆ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತಾ 3 ಬಣ್ಣಗಳುಳ್ಳ ಧ್ವಜ ಅನಿಷ್ಟದ ಸಂಕೇತ ಎಂದು ಆರ್ಎಸ್ಎಸ್ ತನ್ನ ಮುಖವಾಣಿ ಆರ್ಗನೈಸರ್ನಲ್ಲಿ ಬರೆಯುತ್ತದೆ. 55 ವರ್ಷಗಳ ಕಾಲ ರಾಷ್ಟ್ರಧ್ವಜಕ್ಕೆ ಗೌರವ ನೀಡದೆ ತನ್ನ ಸಂಘದ ಕಚೇರಿಯ ಮೇಲೆ ತ್ರಿವರ್ಣ ಧ್ವಜದ ಬದಲಾಗಿ ಭಗವಾಧ್ವಜ ಹಾರಿಸುತ್ತದೆ ಎಂದು ಟೀಕಿಸಿದೆ.
ಓದಿ:ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಮೂರು ಬಾರಿ ಮಾತು ಕೊಟ್ಟು, ತಪ್ಪಿದ್ದಾರೆ: ಜಯಮೃತ್ಯುಂಜಯಶ್ರೀ