ಬೆಂಗಳೂರು: ಸಿಎಂ ಯಡಿಯೂರಪ್ಪ ಮುಖವಾಡ ಧರಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪಾರ್ಕಿಂಗ್ ಹೆಸರಿನಲ್ಲಿ ಹಗಲು ದರೋಡೆ ಮಾಡುವ ಪ್ರಹಸನ ಮಾಡಿ, ಕಾಂಗ್ರೆಸ್ ಕಚೇರಿ ಆವರಣದ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.
ಬಿಜೆಪಿ ಸರ್ಕಾರ ಪ್ರತಿನಿತ್ಯ ಜನರ ಮೇಲೆ ತೆರಿಗೆ ಹೊರೆಯನ್ನು ವಿವಿಧ ರೀತಿಯಲ್ಲಿ ಹೊರಿಸುವ ಕಾರ್ಯತಂತ್ರ ರೂಪಿಸುತ್ತಿದೆ. ಪಾರ್ಕಿಂಗ್ ಶುಲ್ಕದ ಹೆಸರಿನಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಪ್ರಯತ್ನಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ. ಕೂಡಲೇ ಪೇ & ಪಾರ್ಕಿಂಗ್ ಶುಲ್ಕದ ಹೊಸ ನೀತಿಯನ್ನು ಕೈಬಿಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಕೊರೊನಾ ಸಂಕಷ್ಟದಿಂದ ಜನ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಇಂಥ ತೆರಿಗೆ ನೀತಿಯನ್ನು ಜಾರಿಗೊಳಿಸುವುದು ಅತ್ಯಂತ ಬೇಜವಾಬ್ದಾರಿತನ. ಬಿಬಿಎಂಪಿಯಲ್ಲಿ ಈಗ ಆಡಳಿತಾಧಿಕಾರಿಗಳ ಆಡಳಿತವಿದೆ. ಬಿಬಿಎಂಪಿಗೆ ಚುನಾವಣೆ ನಡೆದು ಜನರ ಅಭಿಪ್ರಾಯ ಪಡೆದು, ಸಭೆಯಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ಕಾನೂನು ಜಾರಿಗೊಳಿಸಬೇಕು. ಏಕಾಏಕಿ ಜನವಿರೋಧಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಬಿಜೆಪಿ ಸರ್ಕಾರ ಜನರಿಗೆ ಆರ್ಥಿಕ ಹೊರೆಯನ್ನು ಹಾಕಿ, ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.