ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಯಿತು. ಹೀಗಾಗಿ, ಕೈ ನಿಲುವಿಗೆ ಜೆಡಿಎಸ್ ಸಹ ಅಸಮಾಧಾನ ವ್ಯಕ್ತಪಡಿಸಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸದನದ ಬಾವಿಗೆ ಇಳಿದು ಹೋರಾಟ ಮಾಡಿದರು. ಈ ವೇಳೆ ಜೆಡಿಎಸ್ ಸದಸ್ಯ ಭೋಜೇಗೌಡ ಮಾತನಾಡಿ, ಕಲಾಪ ನಡೆಯಬೇಕು ಎಂದು ನಾವು ಪ್ರತಿಭಟನೆ ನಡೆಸಿದ್ದೇವೆ. ಸುಗಮ ಕಲಾಪ ನಡೆಸಲು ಅನುವು ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಹೋರಾಟ ಒಳ್ಳೆಯದಲ್ಲ, ಕಲಾಪ ನಡೆಸಿ ಎಂದರು.
ಬಿಜೆಪಿ ಸದಸ್ಯ ಲೆಹರ್ ಸಿಂಗ್ ಮಾತನಾಡಿ, ಬಿಜೆಪಿ ಸರ್ಕಾರದ ಜತೆ ನಾನು ಮಾತನಾಡುತ್ತೇನೆ. ದಯವಿಟ್ಟು ಹೋರಾಟ ವಾಪಸ್ ಪಡೆಯಿರಿ ಎಂದರು. ಇದಕ್ಕೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ನಿನ್ನೆ ಶಿವಮೊಗ್ಗದಲ್ಲಿ ಯುವಕನ ಹತ್ಯೆಯಾಗಿದೆ. ಆತ ಭಜರಂಗದಳವನ್ನು ಎರಡು ವರ್ಷದ ಹಿಂದೆಯೇ ಬಿಟ್ಟಿದ್ದಾನೆ. ಇದನ್ನು ಅವರ ತಾಯಿ ಜಿಲ್ಲಾ ಎಸ್ಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆದ್ರೆ ಇದನ್ನು ಸಚಿವ ಈಶ್ವರಪ್ಪ, ಮುಸ್ಲಿಂ ಗೂಂಡಾಗಳು ಮಾಡಿರುವ ಕೊಲೆ ಎಂದಿದ್ದಾರೆ ಎಂದರು.
ಅದಕ್ಕೆ ಸಭಾಪತಿಗಳು ಮಧ್ಯಪ್ರವೇಶಿಸಿ, ಬೇರೆ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ನೀಡುತ್ತೇನೆ. ಅರ್ಜಿ ಕಳಿಸಿ ಎಂದು ಸೂಚಿಸಿದರು. ಆಡಳಿತ ಪಕ್ಷದ ನಾಯಕರು ಹಾಗೂ ಬಿಜೆಪಿ ಶಿವಮೊಗ್ಗ ಭಾಗದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ವಿರೋಧಿಸಿದರು. ನಂತರ ಸಭಾಪತಿ ಪರಿಸ್ಥಿತಿ ತಿಳಿಗೊಳಿಸಿ, ಸಭಾ ನಾಯಕರ ಮಾತಿಗೆ ಅವಕಾಶ ಮಾಡಿಕೊಟ್ಟರು.
ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಈಶ್ವರಪ್ಪ ಚರ್ಚೆ ಮುಗಿದುಹೋದ ಅಧ್ಯಾಯ. ಸಾಕಷ್ಟು ಚರ್ಚೆ ಇದೆ. ಚರ್ಚೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ದಯವಿಟ್ಟು ಸದನ ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದರು.
ಸಭಾಪತಿಗಳು ಮಾತನಾಡಿ, ರಾಜ್ಯಪಾಲರ ಭಾಷಣದ ನಂತರ ಇದುವರೆಗೂ ಕೇವಲ 11 ಗಂಟೆ ಮಾತ್ರ ಚರ್ಚೆ ನಡೆದಿದೆ. ನೀವೇ ಯೋಚಿಸಿ ಎಂದು ಪ್ರತಿಪಕ್ಷಕ್ಕೆ ಸೂಚಿಸಿದರು. ಪ್ರತಿಪಕ್ಷ ನಾಯಕರು ಮಾತನಾಡಿ, ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದರು. ಸದನದಲ್ಲಿ ಗದ್ದಲ ಆರಂಭವಾಯಿತು. ಗದ್ದಲದ ಮಧ್ಯದಲ್ಲೇ ಸಭಾಪತಿಗಳು ಪ್ರಶ್ನೋತ್ತರ ಅವಧಿ ಆರಂಭಿಸಿದರು. ಗದ್ದಲದ ನಡುವೆಯೇ ಪ್ರಶ್ನೋತ್ತರ ಅವಧಿ ಮುಗಿಸಿದ ಸಭಾಪತಿಗಳು, ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.