ಬೆಂಗಳೂರು: ಈ ಹಿಂದೆ ಗ್ಯಾಸ್ ಬೆಲೆ 400 ಕೂಡಾ ಮುಟ್ಟದೇ ಇದ್ದರೂ, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ತಲೆ ಮೇಲೆ ಸಿಲಿಂಡರ್ ಇಟ್ಟುಕೊಂಡು ಹೋರಾಟ ಮಾಡಿದ್ರು. ಯಡಿಯೂರಪ್ಪ ಎತ್ತಿನಗಾಡಿಯಲ್ಲಿ ಬಂದಿದ್ರು. ಸದ್ಯ LPG ಬೆಲೆ 900 ರೂ. ದಾಟಿದೆ. ಇವಾಗ ಎಲ್ಲರೂ ಎಲ್ಲಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಬಿಬಿಎಂಪಿ ಆಸ್ತಿ ತೆರಿಗೆ ವಿಚಾರದಲ್ಲಿ ವಲಯ ವರ್ಗೀಕರಣ ಮಾಡಿ, ಹೆಚ್ಚುವರಿ ತೆರಿಗೆ ಹೊರೆ ಹೊರೆಸಿದ್ದನ್ನು ವಿರೋಧಿಸಿ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ನಿರ್ಧಾರ ಹಿಂತೆಗೆದುಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳದ ಕಾರಣ ಕಾಂಗ್ರೆಸ್ ಇಂದು ಬಿಬಿಎಂಪಿ ಮುತ್ತಿಗೆ ಹಾಕಿತು.
ಪ್ರತಿಭಟನೆ ಬಳಿಕ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, 85 ಸಾವಿರ ಆಸ್ತಿ ಹೊಂದಿರುವ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಒಟ್ಟು 360 ಕೋಟಿ ರೂ. ಹೆಚ್ಚುವರಿ ವಸೂಲಿಗೆ ಮುಂದಾಗಿದೆ. ಬಿಬಿಎಂಪಿ ಅಧಿಕಾರಿಗಳು 70 ಸಾವಿರ ಜನಕ್ಕೆ ನೋಟಿಸ್ ಕೊಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರ ಸರ್ಕಾರವೇ 2017 ರಲ್ಲಿ ಇದನ್ನು ಆರಂಭ ಮಾಡಿತು ಎಂದರು.