ಬೆಂಗಳೂರು :ಸಂಡೂರು ತಾಲೂಕಿನ ತಹಶೀಲ್ದಾರ್ ರಶ್ಮಿ ಅವರನ್ನು ಅಮಾನತು ಮಾಡಿ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಸಂಡೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ತುಕಾರಾಂ ಅವರು ಈ ಬಗ್ಗೆ ಸದನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡನೆ ಮಾಡಿದರು. ತಹಶೀಲ್ದಾರ್ ಕಾಲೇಜಿನಲ್ಲಿ ಪಾರ್ಟಿ ಮಾಡುತ್ತಾರೆ. ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ಆರೋಪ ಅವರ ಮೇಲಿದೆ. ತಹಶೀಲ್ದಾರರು ಕೋಲು ಹಿಡಿದು ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರದಲ್ಲಿ ನನ್ನ ಹೆಸರು ಹಾಕಿಲ್ಲ. ಆ ಮೂಲಕ ಅವಮಾನ ಮಾಡಿದ್ದಾರೆ ಎಂದು ತುಕಾರಾಂ ಸದನದ ಗಮನಕ್ಕೆ ತಂದರು. ಭ್ರಷ್ಟಾಚಾರದ ಆರೋಪದ ಬಗ್ಗೆ ಕೇಳಲು ಅವರ ಕಚೇರಿಗೆ ಹೋದಾಗ, ಅಗೌರವವಾಗಿ ನಡೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತುಕಾರಾಂ ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇದು ಬಹಳ ಗಂಭೀರವಾದ ವಿಚಾರ. ತುಕಾರಾಂ ಪತ್ರದ ಮೇಲೆ ಕ್ರಮಕೈಗೊಳ್ಳಲು ಸಚಿವ ಜೆ.ಸಿ ಮಾಧುಸ್ವಾಮಿ ಸೂಚಿಸಿದ್ದಾರೆ. ಇದಾದ ಮೇಲೂ ಶಾಸಕರಿಗೆ ತಹಶೀಲ್ದಾರರು ಅವಮಾನ ಮಾಡುವುದು ನಿಂತಿಲ್ಲ.
ಸಿಎಂ ಆದೇಶ ಇದ್ದರೂ ಇಲಾಖೆ ಅಧಿಕಾರಿಗಳು ತಹಶೀಲ್ದಾರರನ್ನು ವರ್ಗಾವಣೆ ಮಾಡಿಲ್ಲ. ಈ ವಿಚಾರವಾಗಿ ತೇಲಿಸುವ ಉತ್ತರ ಕೊಡಬಾರದು. ಅಧಿಕಾರಿಗಳು ನಿಮ್ಮ ಜಿಲ್ಲೆಯಲ್ಲಿ ಹೀಗೆ ಮಾತನಾಡಿದರೆ ಸುಮ್ಮನಿರುತ್ತಾರಾ? ಎಂದು ಪ್ರಶ್ನಿಸಿದರು.
ಹೋಗ್ರೀ ನಮಗೆ ಆಡಳಿತ ನಡೆಸುವುದು ಗೊತ್ತಿದೆ ಎಂದರೆ ಸುಮ್ಮನಿರಬೇಕಾ?. ಕೂಡಲೇ ತಹಶೀಲ್ದಾರರನ್ನು ಅಮಾನತು ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ಕಾರ ಇದನ್ನು ಪ್ರತಿಷ್ಠೆಯ ವಿಚಾರವಾಗಿ ನೋಡಬಾರದು ಒತ್ತಾಯಿಸಿದರು.