ಬೆಂಗಳೂರು:ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ಪ್ರಾರ್ಥನಾ ಮಂದಿರಗಳಿಗೆ ಬಲವಂತವಾಗಿ ಬೀಗ ಜಡಿದು ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಭವನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ವೇಳೆ ಚಿಂತಕ ಸಿ.ಎಸ್.ದ್ವಾರಕನಾಥ್ ಮಾತನಾಡಿ, ಉತ್ತರಪ್ರದೇಶ ಮತ್ತು ಇಲ್ಲಿಯ ಮತಾಂತರ ನಿಷೇಧ ಕಾಯ್ದೆ ಒಂದೇ ಆಗಿದೆ. ನಾನು 2 ಬಿಲ್ ಡ್ರಾಫ್ಟ್ ಓದಿದ್ದೇನೆ. ನಾಗಪುರದ ಆರ್ಎಸ್ಎಸ್ ಕಚೇರಿಯಲ್ಲಿ ಮಸೂದೆ ರೆಡಿಯಾಗಿದೆ ಎಂದು ಆರೋಪಿಸಿದರು.
ಮತಾಂತರ ಕಾಯ್ದೆ ದಲಿತ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ. ದಲಿತರ ಸ್ವಾತಂತ್ರ್ಯವನ್ನು ಕಿತ್ತುಕೊಳ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಧರ್ಮದಿಂದ ಬಂದವರು. ಮಸೂದೆಗೆ ಹೇಗೆ ಸಹಿ ಮಾಡಿದಿರಿ ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ, ಕ್ರೈಸ್ತ ಕೇಂದ್ರಗಳ ಮೇಲೆ ದಾಳಿಯಾಗ್ತಿದೆ. ಮಂಡ್ಯದ ನಿರ್ಮಲಾ ಶಾಲೆ ಮೇಲೆ ದಾಳಿ ನಡೆದಿದೆ. ಅಲ್ಲಿನ ಶಿಕ್ಷಕರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. 23 ರಂದು ಗೋಕಾಕ್ ಚರ್ಚ್ ಮೇಲೆ ದಾಳಿ ಆಗಿದೆ. ಪ್ರಾರ್ಥನೆ ವೇಳೆ ಒಳ ನುಗ್ಗಿ ದಾಂಧಲೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ಚರ್ಚ್ಗಳಿಗೆ ಬೀಗ ಹಾಕಲಾಗಿದೆ. ಸ್ಥಳೀಯ ಅಧಿಕಾರಿಗಳೇ ಬೀಗ ಹಾಕಿಸಿದ್ದಾರೆ ಎಂದು ಆರೋಪಿಸಿದರು.