ಬೆಂಗಳೂರು:ಕಾಂಗ್ರೆಸ್ ಪಾದಯಾತ್ರೆ ತಡೆಯಲು ರಾಜ್ಯ ಬಿಜೆಪಿ ಸರ್ಕಾರ ಆರಂಭದಲ್ಲಿ ತೋರಿಸಿದ ಆಸಕ್ತಿಯನ್ನು ಇದೀಗ ತೋರಿಸುತ್ತಿಲ್ಲ. ಬದಲಾಗಿ ಪಾದಯಾತ್ರೆ ನಡೆದರೆ ನಡೆಯಲಿ ಎಂಬ ಉದಾಸೀನತೆಗೆ ಸರ್ಕಾರ ಬಂದಿದೆ ಎಂಬಂತೆ ಗೋಚರವಾಗುತ್ತಿದೆ.
ಕೋವಿಡ್ ನಿಯಮಾವಳಿಗಳು, ನಿರ್ಬಂಧಗಳ ಜೊತೆಗೆ ರಾಮನಗರ ಜಿಲ್ಲೆಯಲ್ಲಿ 144ನೇ ಸೆಕ್ಷನ್ ಜಾರಿ ಮಾಡಿ, ವಾರಾಂತ್ಯ ಕರ್ಫ್ಯೂ ನಿರ್ಬಂಧವನ್ನು ಬಳಸಿಕೊಂಡು ಕಾಂಗ್ರೆಸ್ ನಡೆಸುವ ಪಾದಯಾತ್ರೆ ತಡೆಯುವ ಪ್ರಯತ್ನವನ್ನು ಸರ್ಕಾರ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೀಗ ಸರ್ಕಾರ ಪಾದಯಾತ್ರೆ ತಡೆಯಲು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಅಚ್ಚರಿ ಮೂಡಿಸಿದೆ.
ಮೇಕೆದಾಟು ಪಾದಯಾತ್ರೆಗೆ ನಾಳೆ ಬೆಳಗ್ಗೆ 8.30 ಗಂಟೆಗೆ ಚಾಲನೆ ಸಿಗಲಿದೆ. ಕಾಂಗ್ರೆಸ್ ನಾಯಕರು ರಾಮನಗರದಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯಿಂದ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷರಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಕೈಗೊಂಡರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ನಾಳೆ 144ನೇ ಸೆಕ್ಷನ್ ಜಾರಿಯಲ್ಲಿರುವ ಹಿನ್ನೆಲೆ ಹೆಚ್ಚು ಜನರನ್ನು ಸೇರಿಸುವ ಅವಕಾಶ ಕಾಂಗ್ರೆಸ್ಗೆ ಸಿಗದೆ ಹೋಗಬಹುದು. ಪಾದಯಾತ್ರೆ ತಡೆಯುವುದರಿಂದ ಬಿಜೆಪಿ ಸರ್ಕಾರಕ್ಕೆ ಯಾವುದೇ ಲಾಭ ಇಲ್ಲ. ನಡೆಸುವುದರಿಂದ ನಷ್ಟವೂ ಇಲ್ಲ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಇದರ ಲಾಭ ನಷ್ಟದ ಲೆಕ್ಕಾಚಾರ ಮಾಡದೆ ಅವರ ಪಾಡಿಗೆ ಪಾದಯಾತ್ರೆ ನಡೆಸಲು ಬಿಟ್ಟುಬಿಡೋಣ ಎಂಬ ಮಾತನ್ನು ರಾಜ್ಯ ಬಿಜೆಪಿ ನಾಯಕರು ಆಡಿಕೊಂಡಿದ್ದಾರೆ. ಸರ್ಕಾರದಿಂದ ಪಾದಯಾತ್ರೆ ತಡೆಯುವ ಪ್ರಯತ್ನ ನಡೆದಿದೆ ಎಂಬ ಆರೋಪ ಮಾಡುವ ಅವಕಾಶವನ್ನು ಕಾಂಗ್ರೆಸ್ಗೆ ನೀಡಬಾರದು ಎಂಬ ಮಾತೂ ಕೇಳಿ ಬಂದಿದೆ.
ಕಾಂಗ್ರೆಸ್ಗೆ ನಿಯಮ ಉಲ್ಲಂಘನೆಯ ಭೀತಿ..
ಈಗಾಗಲೇ ಕೊರೊನಾ ತಡೆಗೆ ಹಲವಾರು ನಿಯಮಗಳನ್ನು ಜಾರಿ ಮಾಡಲಾಗಿದೆ. ಒಂದೊಮ್ಮೆ ನಿಯಮವನ್ನು ಕಾಂಗ್ರೆಸ್ ಪಾಲಿಸದಿದ್ದರೆ, ನಿಯಮಾವಳಿಗಳನ್ನು ಗಾಳಿಗೆ ತೂರಿದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಕಾಂಗ್ರೆಸ್ಗೆ ಜನರನ್ನು ಸೇರಿಸುವುದು ಕಷ್ಟ ಸಾಧ್ಯವಾಗಲಿದೆ. ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡುವ ಕಾಂಗ್ರೆಸ್ ಆಶಯಕ್ಕೆ ಮೂರನೇ ಅಲೆ ತೊಡಕಾಗಲಿದೆ.
ಕೋವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡಿದರೆ ಯಶಸ್ಸು ಕಷ್ಟ, ನಿಯಮ ಮೀರಿದರೆ ಕೋವಿಡ್ ವೈರಸ್ ಹರಡಲು ಕಾರಣರಾದರು ಎಂಬ ಕಳಂಕ ಹೊರಬೇಕಾಗಿದೆ. ಇಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಈ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ ನಡೆಸಿದರೆ ಪಕ್ಷಕ್ಕೆ ಅಪಖ್ಯಾತಿ ಎದುರಾಗಬಹುದೆಂಬ ಅಂದಾಜನ್ನು ಸರ್ಕಾರ ಮಾಡಿದೆ ಎನ್ನಲಾಗ್ತಿದೆ.
ಬಿಜೆಪಿಗಿಂತ, ಜೆಡಿಎಸ್ಗೆ ನಷ್ಟ ಹೆಚ್ಚು..
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಿಂದ ಆಡಳಿತ ಪಕ್ಷ ಬಿಜೆಪಿಗೆ ಅಷ್ಟೊಂದು ಹಾನಿ ಇಲ್ಲ. ಬದಲಾಗಿ ಹಳೆಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಜೆಡಿಎಸ್ಗೆ ಸಮಸ್ಯೆ ತಂದೊಡ್ಡಬಹುದು. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.
ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಕಾರ್ಯಕ್ರಮವನ್ನು ಬಾಗಲಕೋಟೆಯಲ್ಲಿ ನಡೆಸಲಾಗಿತ್ತು. 2013 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಂಯ್ಯ ನೇತೃತ್ವದಲ್ಲಿ ಅಕ್ರಮ ಗಣಿಕಾರಿಕೆ ಮತ್ತು ರೆಡ್ಡಿ ಸಹೋದರರನ್ನು ಗುರಿಯಾಗಿಸಿಕೊಂಡು ಬಳ್ಳಾರಿಗೆ ಪಾದಯಾತ್ರೆ ನಡೆಸಿತ್ತು. ಇದು ಬಿಜೆಪಿ ಪಾಲಿಗೆ ದೊಡ್ಡ ಹೊಡೆತ ಕೊಟ್ಟು ಅಧಿಕಾರದಿಂದ ಕೆಳಗಿಳಿಸುವ ಸ್ಥಿತಿ ತಂದೊಡ್ಡಿತ್ತು. ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಇಲ್ಲಿ ಕಾಂಗ್ರೆಸ್ ಪಾದಯಾತ್ರೆ ಅಥವಾ ಇತರೆ ಹೋರಾಟ ಕೈಗೊಂಡರೆ ಅದು ಪಕ್ಷಕ್ಕೆ ಹಾನಿ ಉಂಟು ಮಾಡಲಿದೆ.
ಬೆಂಗಳೂರಿನಲ್ಲಿ ಪಾದಯಾತ್ರೆಗೆ ಅಡ್ಡಿಗೆ ತಂತ್ರ..
ತಮ್ಮ(ಬಿಜೆಪಿ) ಅಸ್ತಿತ್ವ ನಗಣ್ಯವಾಗಿರುವ ಹಳೆಮೈಸೂರು ಭಾಗದಲ್ಲಿ ಪಾದಯಾತ್ರೆ ನಡೆಸುವುದರಿಂದ ಹಾನಿ ಆಗುವುದಿಲ್ಲ. ಮೊದಲ 5 ದಿನದ ಪಾದಯಾತ್ರೆಗೆ ಯಾವುದೇ ತೊಂದರೆ ನೀಡದೆ ಯಾವಾಗ ಕಾಂಗ್ರೆಸ್ ನಾಯಕರು ಬೆಂಗಳೂರು ನಗರ ವ್ಯಾಪ್ತಿಯ ಪ್ರವೇಶಿಸುತ್ತಾರೋ ಆ ಸಮಯಕ್ಕೆ ತಡೆಯೊಡ್ಡುವ ಜೊತೆಗೆ ಪಾದಯಾತ್ರೆಯನ್ನು ಮೊಟಕುಗೊಳಿಸುವ ಪ್ರಯತ್ನ ಸರ್ಕಾರದಿಂದ ನಡೆದಿದೆ ಎಂಬ ಮಾಹಿತಿ ಇದೆ.
ಬೆಂಗಳೂರಿನಲ್ಲಿ ಉತ್ತಮ ಅಸ್ತಿತ್ವ ಹೊಂದಿರುವ ಬಿಜೆಪಿಗೆ ಮುಂದಿನ ವಿಧಾನಸಭೆ ಚುನಾವಣೆ ನಿರ್ಣಾಯಕವಾಗಿದೆ. ಹೆಚ್ಚಿನ ಸ್ಥಾನ ಗೆಲ್ಲುವ ಆಶಯಕ್ಕೆ ಕಾಂಗ್ರೆಸ್ ಪಾದಯಾತ್ರೆ ತೊಡಕಾಗಬಹುದು ಎಂಬ ಉದ್ದೇಶದಿಂದ ಬೆಂಗಳೂರು ನಗರದಲ್ಲಿ ಪಾದಯಾತ್ರೆ ನಡೆಸದಂತೆ ತಡೆಯುವ ಸಿದ್ಧತೆ ಸರ್ಕಾರ ಕೈಗೊಂಡಿದೆ ಎಂಬ ಮಾಹಿತಿ ಇದೆ.