ಬೆಂಗಳೂರು :ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಚಿವ ಈಶ್ವರಪ್ಪನವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.
ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ ಇಂದು ಬೆಂಗಳೂರು ಕೇಂದ್ರ, ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟಿಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಯುವ ಘಟಕದ ಅಧ್ಯಕ್ಷ ಮೊಹ್ಮದ್ ನಲಪಾಡ್ ಸೇರಿದಂತೆ ಮಾಜಿ ಶಾಸಕರುಗಳು ಭಾಗವಹಿಸಿದ್ದರು.
ಸಚಿವ ಈಶ್ವರಪ್ಪ ವಿರುದ್ಧದ ಪ್ರತಿಭಟನೆಯಲ್ಲಿ ಮಾಜಿ ಸಚಿವರುಗಳಾದ ರಾಮಲಿಂಗಾರೆಡ್ಡಿ ಮತ್ತು ಹೆಚ್ ಎಂ ರೇವಣ್ಣ ಮಾತನಾಡಿರುವುದು.. ಈ ವೇಳೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಈಶ್ವರಪ್ಪನವರಿಗೆ ತಾವು ಏನು ಮಾತಾಡ್ತಿದ್ದೀನಿ ಅನ್ನೋ ಅರಿವು ಇಲ್ಲ. ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜದ ಜಾಗದಲ್ಲಿ ಕೇಸರಿ ಬಾವುಟ ಹರಿಸುತ್ತೇವೆ ಅಂತಾರೆ. ಬಿಜೆಪಿಯವರು ದೊಡ್ಡ ರಾಷ್ಟ್ರ ಭಕ್ತರು ಅಂತಾ ಹೇಳಿಕೊಳ್ಳುತ್ತಾ ಜನರ ಮುಂದೆ ಬಡಾಯಿಕೊಚ್ಚಿಕೊಳ್ತಾರೆ.
ಆದರೆ, ಕೇಸರಿ ಬಾವುಟ ಹಾರಿಸುತ್ತೀವಿ ಅಂತಾ ಹೇಳಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಇದರ ಅರ್ಥ ಮುಂದಿನ ದಿನಗಳಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಬಾವುಟ ಹಾರಿಸುತ್ತಾರೆ ಎಂದರ್ಥ ಅಂದರು. ಇತ್ತ ಯಾವ ಬಿಜೆಪಿ ನಾಯಕರು ಈಶ್ವರಪ್ಪ ಹೇಳಿದ್ದನ್ನು ತಪ್ಪು ಎಂದು ಹೇಳಲಿಲ್ಲ.
ಅವರು ಮಾತಾನಾಡಿದ್ದೇ ಸರಿ ಎನ್ನುತ್ತಿದ್ದಾರೆ. ಬಿಜೆಪಿಯ ಮೆದುಳು ಆರ್‌ಎಸ್‌ಎಸ್. ನಾಗ್ಪುರದಲ್ಲಿ ಈತನಕ ರಾಷ್ಟ್ರಧ್ವಜ ಹಾರಿಸಿಲ್ಲ. ಸುಮ್ಮನೆ ದೇಶ ಪ್ರೇಮಿಗಳು ಅಂತಾ ಹೇಳಿಕೊಂಡು ಓಡಾಡ್ತಾರೆ ಅಷ್ಟೇ ಅಂತಾ ಕಿಡಿಕಾರಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆರ್‌ಎಸ್ಎಸ್‌ನವರು ಬ್ರಿಟಿಷ್ ಜೊತೆಗೆ ಶಾಮೀಲು ಆಗಿದ್ದವರು.
ಬಿಜೆಪಗರೆಲ್ಲರೂ ಆರ್‌ಎಸ್ಎಸ್‌ನ ಪೂರ್ವಜರೇ, ಇವರೆಲ್ಲ ಕಾಂಗ್ರೆಸ್ ಅವರಿಗೆ ದೇಶಭಕ್ತಿ ಹೇಳಿಕೊಡಲು ಬರುತ್ತಾರೆ. ಮೊದಲಿಗೆ ಈಶ್ವರಪ್ಪನವರನ್ನು ವಜಾ ಮಾಡಿ, ನಂತರ ರಾಜೀನಾಮೆ ಕೊಡಬೇಕು. ಇದರ ಭಾಗವಾಗಿ ನಾವು ಡಿಸಿ ಕಚೇರಿಗೆ ತೆರಳಿ ಮನವಿ ಪತ್ರವನ್ನ ಕೊಡಲಿದ್ದೇವೆ ಎಂದು ಹೇಳಿದರು.
ಬಳಿಕ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಬಿಜೆಪಿಯವರ ಮನಸ್ಥಿತಿ ಹೇಗೆ ಇದೆ ಎಂಬುದು ಅವರ ಮಾತಿನಿಂದಲೇ ತಿಳಿದು ಬರುತ್ತದೆ. ಮುಖ್ಯಮಂತ್ರಿಗಳ ಪರಿಸ್ಥಿತಿ ಹೇಗೆ ಆಗಿದೆ ಅಂದರೆ ಪಕ್ಷ ಒಂದೇ, ಆದರೆ ಮೂರು ಬಾಗಿಲು ಆಗಿಬಿಟ್ಟಿದೆ. ಹಳೇ ಬಿಜೆಪಿಯವರು, ದಳದಿಂದ ಹೋದವರು, ನಮ್ಮಲ್ಲಿ ಅಧಿಕಾರ ಸಿಕ್ಕಿಲ್ಲ ಅಂತಾ ಬಿಟ್ಟು ಹೋಗಿರುವ ಹಲವರು ಈ ಮೂವರು ಸೇರಿ ಮೂರು ಬಾಗಿಲು ಆಗಿಬಿಟ್ಟಿದೆ.
ಪಾಪಾ, ಈ ಮೂರು ಬಾಗಿಲಿನಲ್ಲಿ ಯಾವ ಬಾಗಿಲಿನಲ್ಲಿ ಹೋಗೋದು ಅಂತಾ ಸಿಎಂ ಬಸವರಾಜ ಬೊಮ್ಮಾಯಿಗೆ ತಿಳಿಯುತ್ತಿಲ್ಲ ಎಂದು ಕಾಲು ಎಳೆದರು. ಇಂತಹ ಸರ್ಕಾರ ಇದ್ದಾಗ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವುದು ಹೇಗೆ ಎಂದರು. ಈಶ್ವರಪ್ಪನವರು ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಬಾವುಟ ಹಾರಿಸುತ್ತೀವಿ ಅಂತಾರೆ. ಇವೆರಿಗೆಲ್ಲ ಯಾವಾಗ ಬುದ್ಧಿ ಬರುವುದು, ಇವರ ವಿರುದ್ಧ ನಿರಂತರವಾಗಿ ಹೋರಾಟ ಮಾಡುವುದಾಗಿ ಇದೇ ವೇಳೆ ಹೇಳಿದರು.
ಓದಿ :ಹರ್ಷ ಕೊಲೆ ಪ್ರಕರಣದ ತನಿಖೆಯನ್ನು ಸೂಕ್ಷ್ಮವಾಗಿ ನಡೆಸುತ್ತಿದ್ದೇವೆ: ಎಡಿಜಿಪಿ ಪ್ರತಾಪ್ ರೆಡ್ಡಿ