ಕರ್ನಾಟಕ

karnataka

ETV Bharat / city

ಕೊರೊನಾ ಆತಂಕ... ಕಾಂಗ್ರೆಸ್​ ಆರೋಗ್ಯ ಸಹಾಯವಾಣಿಗೂ ಬರುತ್ತಿವೆ ನೂರಾರು ಕರೆಗಳು - ಕೊರೊನಾ ವೈರಸ್

ಮಹಾಮಾರಿಯಂತೆ ದೇಶವನ್ನೇ ಕಾಡುತ್ತಿರುವ ಕೋವಿಡ್​-19 ನಿಯಂತ್ರಣಕ್ಕೆ ಮತ್ತು ಮುಂಜಾಗ್ರತ ಕ್ರಮ ವಹಿಸಲು ಸಂಘ ಸಂಸ್ಥೆಗಳು, ಸರ್ಕಾರ ತಮ್ಮದೇ ಆದ ಪಾತ್ರವಹಿಸುತ್ತಿವೆ. ಇತ್ತ ಪ್ರತಿಪಕ್ಷ ಕಾಂಗ್ರೆಸ್​ ಕೂಡಾ ಆರೋಗ್ಯ ಸಹಾಯವಾಣಿಯನ್ನು ತೆರೆದಿದ್ದು, ಪ್ರತಿನಿತ್ಯ ಕರೆಮಾಡುವ ಜನರಿಗೆ ಕೊರೊನಾ ವೈರಸ್​ನ ಅನುಮಾನ ಪರಿಹಾರ ಮತ್ತು ಆರೋಗ್ಯದ ಕುರಿತು ಮಾರ್ಗದರ್ಶನವನ್ನು ಕೆಪಿಸಿಸಿ ವೈದ್ಯ ಘಟಕದಿಂದ ನೀಡಲಾಗುತ್ತಿದೆ.

congress-party-corona-helpline
ಕಾಂಗ್ರೆಸ್ ಆರೋಗ್ಯ ಸಹಾಯವಾಣಿ

By

Published : Apr 28, 2020, 10:42 AM IST

Updated : Apr 28, 2020, 11:06 AM IST

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ನಿಟ್ಟಿನಲ್ಲಿ ಕೊಡುಗೆ ಸಲ್ಲಿಸುತ್ತಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಕೂಡ ಸಹಾಯವಾಣಿ ಆರಂಭಿಸಿ ನಿತ್ಯ ನೂರಾರು ಮಂದಿಗೆ ಆರೋಗ್ಯ ಸಲಹೆ ನೀಡುವ ಕಾರ್ಯ ಮಾಡುತ್ತಿದೆ.

ರಾಜ್ಯದಲ್ಲಿ ಸರ್ಕಾರ ಸಹಾಯವಾಣಿ ಆರಂಭಿಸುವುದಕ್ಕಿಂತ ಮುನ್ನ ಕಾಂಗ್ರೆಸ್ ಪಕ್ಷ ತಮ್ಮ ಸಹಾಯವಾಣಿ ಆರಂಭಿಸಿದೆ. 75 ವೈದ್ಯರ ತಂಡದೊಂದಿಗೆ ಆರಂಭವಾದ ಸಹಾಯವಾಣಿ ಸದ್ಯ 82ಕ್ಕೂ ಹೆಚ್ಚು ವೈದ್ಯರ ಸಹಕಾರದಿಂದ ಅತ್ಯಂತ ವ್ಯವಸ್ಥಿತವಾಗಿ ನಾಗರಿಕರ ಆರೋಗ್ಯ ಸಂಬಂಧಿ ಸಮಸ್ಯೆ, ಅನುಮಾನ ಪರಿಹರಿಸುವ ಕಾರ್ಯ ಮಾಡುತ್ತಿದೆ.

ಬೆಂಗಳೂರಿನ ರೇಸ್​ ಕೋರ್ಸ್​​ ರಸ್ತೆಯ ಕಾಂಗ್ರೆಸ್ ಭವವನದಲ್ಲಿ ಸಹಾಯವಾಣಿಯ ಕೇಂದ್ರ ಕಚೇರಿ ತೆರೆಯಲಾಗಿದೆ. ವಿವಿಧ ರೋಗ ಸಂಬಂಧಿ ಸಲಹೆ, ಸೂಚನೆ, ಆರೋಗ್ಯ ಮಾಹಿತಿ ನೀಡುವ ವೈದ್ಯರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹಾಯವಾಣಿ ಕೇಂದ್ರ ಇಲ್ಲಿದ್ದು, ವೈದ್ಯರುಗಳು ತಾವಿದ್ದ ಸ್ಥಳದಿಂದಲೇ ಕರೆ ಮಾಡಿದ ವ್ಯಕ್ತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಾರೆ.

ಕೊರೊನಾ ಭೀತಿ: ಕಾಂಗ್ರೆಸ್ ಆರೋಗ್ಯ ಸಹಾಯವಾಣಿಗೆ ನಿತ್ಯ ಬರುತ್ತಿವೆ ನೂರಾರು ಕರೆಗಳು

82 ವೈದ್ಯರ ತಂಡದಲ್ಲಿ ಮಾನಸಿಕ ತಜ್ಞರು, ಸಾಮಾನ್ಯ ರೋಗ ತಜ್ಞರು, ಇಎನ್​ಟಿ ತಜ್ಞರು, ಹಲ್ಲಿನ ವೈದ್ಯರು, ಕ್ಯಾನ್ಸರ್ ಸೇರಿದಂತೆ ಮತ್ತಿತರ ಮಾರಕ ರೋಗಗಳ ತಜ್ಞರು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ಟಿಬಿ, ವಯೋಸಹಜ ಸಮಸ್ಯೆ, ಮೂಳೆ ತಜ್ಞರು, ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ತಜ್ಞರು, ಪ್ರಸೂತಿ ತಜ್ಞರು ಸೇರಿದಂತೆ ಎಲ್ಲಾ ವಿಧದ ವೈದ್ಯರ ಸಮೂಹ ಇದಾಗಿದೆ.

ಏ.7ಕ್ಕೆ ಆರಂಭ

ವಿಶ್ವ ಆರೋಗ್ಯ ದಿನ ಸಂದರ್ಭ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ವೈದ್ಯರ ಘಟಕಕ್ಕೆ ಚಾಲನೆ ನೀಡಿ 080-47188000 ಸಂಖ್ಯೆಗೆ ಕರೆಮಾಡಿ ನಾಗರಿಕರು ತಮ್ಮ ಮನಸ್ಸಿನಲ್ಲಿರುವ ಕೊರೊನಾ ಭೀತಿಯ ಆತಂಕವನ್ನು ದೂರ ಮಾಡಿಕೊಳ್ಳಬಹುದು. ಅಲ್ಲದೇ ಇತರೆ ಸಮಸ್ಯೆಯನ್ನೂ ವೈದ್ಯರ ಜತೆ ಚರ್ಚಿಸಿ ಸೂಕ್ತ ಮರ್ಗದರ್ಶನ ಪಡೆಯಬಹುದು ಎಂದು ತಿಳಿಸಲಾಗಿತ್ತು.

ಈ ನಿಟ್ಟಿನಲ್ಲಿ ಅಂದಿನಿಂದ ಇಂದಿನವರೆಗೆ 900ಕ್ಕೂ ಹೆಚ್ಚು ಮಂದಿ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ. ಸಾಮಾನ್ಯ ಸಮಸ್ಯೆ ಇದ್ರು ಅವರಲ್ಲಿ ಕೊರೊನಾ ಭೀತಿ ಇರಬಹುದೆಂದು ಕರೆ ಮಾಡಿ ಅನುಮಾನ ಪರಿಹರಿಸಿಕೊಂಡವರೇ ಹೆಚ್ಚಾಗಿದ್ದಾರೆ.

ಮಾನಸಿಕ ವೇದನೆಗೆ ಪರಿಹಾರ ಬಯಸಿ ಕೂಡ ನೂರಾರು ಕರೆಗಳು ಬಂದಿವೆ. ಕೆಪಿಸಿಸಿ ವೈದ್ಯರ ಘಟಕ ಅಧ್ಯಕ್ಷ ಡಾ. ರಾಘವೇಂದ್ರ ಮಾತನಾಡಿ, ಸರ್ಕಾರದ 104 ಸಹಾಯವಾಣಿ ಮಾದರಿಯಲ್ಲೇ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಈ ಸಹಾಯವಾಣಿ ಚಿಕಿತ್ಸೆ ನೀಡುವ ಮಾದರಿಯದ್ದಲ್ಲ, ಸಲಹೆ ನೀಡುವ ಕಾರ್ಯ ಮಾತ್ರ ಮಾಡುತ್ತೇವೆ ಎಂದರು.

ಅಲ್ಲದೆ ಸೂಕ್ತ ಆರೋಗ್ಯ ಸಲಹೆ, ಮಾರ್ಗದರ್ಶನದೊಂದಿಗೆ ಯಾವ ಸಮಸ್ಯೆಗೆ ಯಾವ ವೈದ್ಯರನ್ನು ಭೇಟಿ ಮಾಡಬೇಕೆಂದು ತಿಳಿಸುತ್ತೇವೆ. ಆರೋಗ್ಯದ ವಿಚಾರದಲ್ಲಿ ಒಂದಿಷ್ಟು ಹೆಚ್ಚಾಗಿ ಆತಂಕಕ್ಕೆ ಒಳಗಾದವರಿಗೆ ಸೂಕ್ತ ಪರಿಹಾರ ಸೂಚಿಸುತ್ತೇವೆ. ಕೌನ್ಸ್​ಲಿಂಗ್ ಮೂಲಕ ಆರೋಗ್ಯ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

Last Updated : Apr 28, 2020, 11:06 AM IST

ABOUT THE AUTHOR

...view details