ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಸುದೀರ್ಘ ಟ್ವೀಟ್ ವಾರ್ ನಡೆದಿದೆ.
ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರತಿಪಾದಿಸಿರುವ ಮಾತಿನಲ್ಲಿ ನಳಿನ್ ಕುಮಾರ್ ಕಟೀಲ್ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ತೀವ್ರ ಆಕ್ರೋಶ ಗೊಂಡ ಕಾಂಗ್ರೆಸ್ ಪಕ್ಷ ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿತ್ತು. ಇದು ಟ್ವೀಟ್ ವಾರ್ ಆಗಿ ಪರಿವರ್ತನೆಗೊಂಡಿದೆ.
ನಿನ್ನೆ ಟ್ವೀಟ್ ಮಾಡಿದ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರು ರೈತನ ಮಗನಾಗಿ, ರೈತಪರ ಹೋರಾಟಗಳಿಂದ ಜನಮನ ಗೆದ್ದವರು. ಆದರೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು, ರೈತರ ಭೂಮಿಯನ್ನು ಕಬಳಿಸಿ ಈಗ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ!! ಅಮಾಯಕ ರೈತರನ್ನು ದಾರಿ ತಪ್ಪಿಸಿ ಮೋಸಗೊಳಿಸುತ್ತಿದ್ದಾರೆ!! ಅವರ ಕಪಟ ಹೋರಾಟವನ್ನು ನೈಜ ರೈತ ನಂಬುವುದಿಲ್ಲ ಎಂದಿದ್ದರು.
ಇದಕ್ಕೆ ಇಂದು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿಯ ಕಾಮಿಡಿ ಆ್ಯಕ್ಟರ್ ನಳಿನ್ ಕುಮಾರ್ ಕಟೀಲ್ ಅವರೇ ಅಕ್ರಮ ಡಿನೋಟಿಫಿಕೇಷನ್ನಂತಹ ಭೂ ಹಗರಣದವರು, ಅಕ್ರಮ ಗಣಿ ಹಗರಣದವರು, ಜೈಲಿಗೆ ಹೋಗಿ ಬಂದವರು ನಿಮ್ಮಲ್ಲೇ ಇದ್ದಾರೆ. "ಒಂದು ಡಾಲರ್'ಗೆ 15 ರೂಪಾಯಿ" ಮಾಡುತ್ತೇವೆಂದು ಅಮಾಯಕರ ದಾರಿ ತಪ್ಪಿಸುವ ಕಲೆ ನಿಮಗಿಂತ ಚೆನ್ನಾಗಿ ಇನ್ಯಾರಿಗೆ ತಿಳಿದಿರಲು ಸಾಧ್ಯ ಹೇಳಿ !!? ಎಂದಿತ್ತು.
ಕಟೀಲ್ ಪ್ರತಿಕ್ರಿಯೆ :ಕಾಮಿಡಿ ಮಾಡುವ ವ್ಯಕ್ತಿ ಯಾರು ಮತ್ತು ಕಾಮಿಡಿಯಾದ ಪಕ್ಷ ಯಾವುದು ಎಂದು ದೇಶದ ಜನತೆಗೆ ಸರಿಯಾಗಿ ತಿಳಿದಿದೆ! ಜೈಲಿಗೆ ಹೋಗಿ ಬಂದವರೆಲ್ಲಾ ಬಿಜೆಪಿಯಲ್ಲೇ ಇರುವುದು ಎಂದಾದರೇ ತಿಹಾರ್ ಜೈಲು ಕಾಂಗ್ರೆಸ್ ಪಕ್ಷಕ್ಕೆ ಜೈಲಿನ ಹಾಗೆ ಕಾಣಲಿಲ್ಲವೇ? ಜಾಮೀನಿನ ಮೇಲೆ ಹೊರಗೆ ಇರುವುದೇ ಪಕ್ಷದ ಅಧ್ಯಕ್ಷರಾಗಲು ಇರುವ ಮಾನದಂಡವೇ.? ಎಂದು ಮರುಪ್ರಶ್ನೆ ಹಾಕಿದ್ದರು.
ಕಾಂಗ್ರೆಸ್ ವಾಗ್ದಾಳಿ :ಇದಕ್ಕೆ ಪ್ರತಿಯಾಗಿ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನೇರವಾಗಿ ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗುವುದಕ್ಕೂ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಎದುರಾಳಿ ಪಕ್ಷದ ಪ್ರಭಾವಿ ನಾಯಕರ ಮೇಲೆ ದ್ವೇಷ ರಾಜಕಾರಣ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ವಿಷಯ ನಾಡಿನ ಜನತೆಗೂ ತಿಳಿದಿದೆ. ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್ ಅವರೇ, ಈ ಸಣ್ಣ ವ್ಯತ್ಯಾಸ ನಿಮಗೆ ತಿಳಿಯದೇ ಹೋದದ್ದು ದುರಂತ ಎಂದಿದೆ.
ಅಂದಹಾಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಲು ಕ್ರಿಮಿನಲ್ ಕೇಸಿನಲ್ಲಿ ಗಡಿಪಾರಾಗುವುದು, ಸಿ.ಎಂ ಆಗಲು ಭ್ರಷ್ಟಾಚಾರ ಎಸಗುವುದು, ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಲು 1 ಡಾಲರ್ ಮೌಲ್ಯವನ್ನು 15 ರೂಪಾಯಿಗೆ ಇಳಿಸುತ್ತೇವೆ ಎಂದು ಹಸಿ ಸುಳ್ಳು ಹೇಳುವುದೇ ನಿಮ್ಮ ಪಕ್ಷಕ್ಕೆ ಮಾನದಂಡವೇ? ಎಂದು ಕೇಳಿದೆ.
ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಟ್ವೀಟ್ ವಾರ್ ಇನ್ನಷ್ಟು ಮುಂದುವರಿಯುವ ಸಾಧ್ಯತೆ ಇದೆ.