ಬೆಂಗಳೂರು:ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಗೆ ಸರಣಿ ಟ್ವೀಟ್ ಮಾಡಿ ತರಾಟೆಗೆ ತೆರದುಕೊಂಡಿರುವ ಬಿಜೆಪಿ, ನಿಮಗೆ ಸಮುದಾಯಕ್ಕಿಂತಲೂ ರಾಜಕೀಯ ಲಾಭವೇ ಮುಖ್ಯವಾಗಿದೆ ಎಂದು ಟೀಕಿಸಿದೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತಂದರೆ ಒಂದು ವರ್ಗದ ಜನರಿಗೆ ನೋವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಹಂಗಾಮಿ ಅಧಿನಾಯಕಿಗೆ ನೋವಾಗಬಹುದು. ಹಿಂದುಗಳ ಭಾವನೆಗಳಿಗಿಂತಲೂ ಹೆಚ್ಚಾಗಿ ನಿಮಗೆ ರಾಜಕೀಯ ಲಾಭವೇ ಮುಖ್ಯ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಬಿಜೆಪಿ ಟಾಂಗ್ ನೀಡಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮತಾಂತರ ನಿಷೇಧ ಕಾಯ್ದೆ ವಿರೋಧಿಸುವಲ್ಲೂ ಕಾಂಗ್ರೆಸ್ ನಾಯಕರು ಪೈಪೋಟಿಗೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಡಿ.ಕೆ. ಶಿವಕುಮಾರ್ ಸರದಿ. ಟಿಪ್ಪು ಜಯಂತಿ ಆಚರಣೆ ನಡೆಸಿದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ನೀವು ಯಾರನ್ನೋ ಮೆಚ್ಚಿಸಲು ಕನಕಪುರದಲ್ಲಿ ಅಕ್ರಮವಾಗಿ ಏಸುವಿನ ಏಕಶಿಲಾ ವಿಗ್ರಹ ಸ್ಥಾಪನೆಗೆ ಹೊರಟವರಲ್ಲವೇ? ನೀವು ವಿರೋಧಿಸುವುದರಲ್ಲಿ ಅತಿಶಯವಿಲ್ಲ ಎಂದು ಡಿಕೆಶಿ ವಿರುದ್ಧ ಹರಿಹಾಯ್ದಿದೆ.
ಇದನ್ನೂ ಓದಿ: ದೇಶದ ಅಭಿವೃದ್ಧಿಯಲ್ಲಿ ರಾಜ್ಯದ ಉದ್ಯಮಿಗಳ ಪಾತ್ರ ಅಪಾರ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಆಕಾಶವನ್ನು ಅಳೆಯುವುದಕ್ಕೆ ಮುನ್ನ ಅಂಗಳ ಅಳೆಯುವ ಸಾಮರ್ಥ್ಯ ಇರಬೇಕು. ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಅಬ್ಬರಿಸುವುದಕ್ಕೂ ಮುನ್ನ ನೆಟ್ಟಗೆ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಮರ್ಥ್ಯ ಇರಬೇಕು ಎಂದು ಸಿದ್ದರಾಮಯ್ಯ ವಿರುದ್ಧದ ಬಿಜೆಪಿ ಕುಟುಕಿದೆ.