ಬೆಂಗಳೂರು: ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿನ ವಿಷಯ ವಿಧಾನ ಪರಿಷತ್ ನಲ್ಲಿ ಪ್ರತಿಧ್ವನಿಸಿತು. ತೀರ್ಪು ಯಾಕೆ ಈ ರೀತಿ ಬಂದಿತು ಎನ್ನುವ ಕುರಿತು ಚರ್ಚೆ ನಡೆಯಬೇಕು ಎಂದು ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಆಗ್ರಹಿಸಿದರು. ಈ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ಗದ್ದಲಕ್ಕೆ ಕಾರಣವಾಯಿತು.
ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಏಕೆ ಬಂತು, ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ಯಾಕೆ ಹೀಗೆ ಬಂತು, ಸರ್ಕಾರದ ಆದೇಶವನ್ನೇ ಕೋರ್ಟ್ ಎತ್ತಿ ಹಿಡಿಯಿತು. ಇದು ಯಾಕೆ ಹೀಗಾಯಿತು. ಹಿಜಾಬ್ ಬುರ್ಖಾ ನೂರಾರು ವರ್ಷದಿಂದ ಇದೆ. ವಿವಾದ ಈಗ ಯಾಕಾಯಿತು ಎಂದು ಸಲೀಂ ಅಹಮದ್ ಪ್ರಸ್ತಾಪಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಹೈಕೋರ್ಟ್ ತೀರ್ಪನ್ನು ಒಪ್ಪುತ್ತೀರಾ ಅಥವಾ ವಿರೋಧಿಸುತ್ತೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಹರಿ ಪ್ರಸಾದ್, ನಮ್ಮ ನಿಲುವನ್ನು ಸುಪ್ರೀಂ ಕೋರ್ಟ್ ಗೆ ಹೇಳುತ್ತೇವೆ. ನಾವು ಇಲ್ಲಿ ಅದನ್ನು ಹೇಳಬೇಕಿಲ್ಲ, ನಮ್ಮ ಸದಸ್ಯರು ಮಾತನಾಡುವುದನ್ನು ಕೇಳಿಸಿಕೊಳ್ಳುವಂತೆ ಆಗ್ರಹಿಸಿದರು.
ನಂತರ ಭಾಷಣ ಮುಂದುವರೆಸಿದ ಸಲೀಂ ಅಹಮದ್, ಕೋರ್ಟ್ ತೀರ್ಪನ್ನು ಪ್ರತಿಯೊಬ್ಬರೂ ಒಪ್ಪಬೇಕು, ನಾವು ಒಪ್ಪುತ್ತೇವೆ. ಆದರೆ ಈ ಘಟನೆ ಯಾಕಾಯಿತು? ಕೇಸರಿ ಶಾಲು ಪದ್ಧತಿ ಮೊದಲು ಇತ್ತಾ? ಅಣ್ಣ-ತಮ್ಮಂದಿರ ರೀತಿ ಇದ್ದ ವಿದ್ಯಾರ್ಥಿಗಳು ಈಗ ಮುಖ ಕೊಟ್ಟು ಮಾತನಾಡದ ಪರಿಸ್ಥಿತಿ ಬಂದಿದೆ. ಇದಕ್ಕೆ ಸರ್ಕಾರವೇ ಕಾರಣವೆಂದು ಆರೋಪಿಸಿದರು.
ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿ, ನೆಮ್ಮದಿಯಿಂದ ಇದ್ದ ಮಕ್ಕಳು ನಿಮ್ಮ ಚಿತಾವಣೆಯಿಂದ ಹಿಜಾಬ್ ಧರಿಸಿ ಹೋದರು ಎಂದು ಕಾಂಗ್ರೆಸ್ ವಿರುದ್ಧ ನೇರ ಆರೋಪ ಮಾಡಿದರು. ಈ ವೇಳೆ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಕಾಂಗ್ರೆಸ್ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ನಂತರ ಮಾತು ಮುಂದುವರೆಸಿದ ಸಲೀಂ ಅಹಮದ್, ಇಂದು ಕೋಮು ಸಾಮರಸ್ಯಕ್ಕೆ ಧಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಮಕ್ಕಳಲ್ಲಿ ಭೇಧಭಾವ ತಂದಿದ್ದಾರೆ. ಇದಕ್ಕೆ ಯಾರು ಕಾರಣ? ವಿದ್ಯಾರ್ಥಿಗಳಲ್ಲಿ ಕಂದಕ ತರುವ ಹಿಂದೂ, ಮುಸ್ಲಿಂ ಯಾವುದೇ ಸಂಘಟನೆ ಇರಲಿ ಬ್ಯಾನ್ ಮಾಡಲಿ ಎಂದಿದ್ದೇವೆ. ಈ ಸರ್ಕಾರಕ್ಕೆ ಧಮ್ ಇದೆಯಾ? ಶಿವಮೊಗ್ಗ ಹರ್ಷ ಕೊಲೆಗೆ 25 ಲಕ್ಷ ಕೊಟ್ಟರು, ಗದಗದಲ್ಲಿ ಮುಸ್ಲಿಂ ವ್ಯಕ್ತಿ ಕೊಲೆಗೆ ಪರಿಹಾರ ಕೊಟ್ಟಿಲ್ಲ, ಯಾಕೆ ಈ ತಾರತಮ್ಯ ಎಂದು ಇದೇ ವೇಳೆ ಪ್ರಶ್ನಿಸಿದರು.
ಓದಿ :ಪಂಜಾಬ್ ಇತಿಹಾಸದಲ್ಲೇ ಯಾರೂ ತೆಗೆದುಕೊಳ್ಳದ ನಿರ್ಧಾರವನ್ನು ಶೀಘ್ರ ಘೋಷಿಸುತ್ತೇನೆ: ಪಂಜಾಬ್ ಸಿಎಂ