ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ನಗರದಲ್ಲಿ ಮುಂದುವರಿದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ಹಂತದ ಪಾದಯಾತ್ರೆ ತನ್ನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬೆಂಗಳೂರು ನಗರದಲ್ಲಿ ಎರಡನೇ ದಿನದ ಪಾದಯಾತ್ರೆ ಮುಂದುವರೆಯುತ್ತಿದೆ. ಮೊದಲ ದಿನ ಕೆಂಗೇರಿಯಿಂದ ಬಿಟಿಎಂ ಲೇಔಟ್ ತಲುಪಿದ್ದು, ಇಂದು ಅಲ್ಲಿಂದ ಅರಮನೆ ಮೈದಾನಕ್ಕೆ ತಲುಪಲಿದೆ. ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಮುಂದುವರಿದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬೆಂಗಳೂರಿನ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅದ್ವೈತ್ ಪೆಟ್ರೋಲ್ ಬಂಕ್ ಹತ್ತಿರದ 20ನೇ ಮುಖ್ಯರಸ್ತೆಯ ಬಿಬಿಎಂಪಿ ಆಟದ ಮೈದಾನಕ್ಕೆ ಮಂಗಳವಾರ ರಾತ್ರಿ ತೆರಳಿ ತಂಗಿರುವ ಕಾಂಗ್ರೆಸ್ ನಾಯಕರು ಇಂದು ಬೆಳಗ್ಗೆ ಅಲ್ಲಿಂದಲೇ ಪ್ರಯಾಣ ಆರಂಭಿಸಿದ್ದಾರೆ.
ಅದೈತ್ ಪೆಟ್ರೋಲ್ ಬಂಕ್‌ನಿಂದ ಹೊರಟ ಕಾಂಗ್ರೆಸ್ ನಾಯಕರು ಮಾರುತಿನಗರ, ಹೊಸೂರು ಮುಖ್ಯರಸ್ತೆ, ಫೋರಂ ಮಾಲ್, ಪಾಸ್‌ಪೋರ್ಟ್ ಆಫೀಸ್, ಇನ್‌ಫೆಂಟ್ ಜೀಸಸ್ ರಸ್ತೆ, ಮಖಾ ಮಸ್ಜಿದ್, ಜಸ್ಮಾ ದೇವಿ ಭವನ, ಹಾಸ್ಮ್ಯಾಟ್ ಆಸ್ಪತ್ರೆ, ಟ್ರಿನಿಟಿ ಸರ್ಕಲ್, ಗುರುನಾನಕ್ ಮಂದಿರ್, ತಿರುವಳ್ಳುವರ್ ಪ್ರತಿಮೆ, ಕೋಲ್ಸ್ ಪಾರ್ಕ್, ನಂದಿದುರ್ಗ ರಸ್ತೆ, ಜೆ.ಸಿ. ನಗರ ಪೊಲೀಸ್ ಠಾಣೆ, ಮುನಿರೆಡ್ಡಿ ಪಾಳ್ಯ ಮಾರ್ಗವಾಗಿ ಟಿ.ವಿ.ಟವರ್, ಮೇಖ್ರಿ ಸರ್ಕಲ್ ಮೂಲಕ ಅರಮನೆ ಆವರಣ ತಲುಪಲಿದೆ.
ಬನಶಂಕರಿ ದೇವಾಲಯದಲ್ಲಿ ಪೂಜೆ:ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಸಂದರ್ಭ ಮಂಗಳವಾರ ರಾತ್ರಿ ಬೆಂಗಳೂರಿನ ಬನಶಂಕರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶಾಸಕಿ ಸೌಮ್ಯಾ ರೆಡ್ಡಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಮುಂದುವರಿದ ಮೇಕೆದಾಟು ಪಾದಯಾತ್ರೆ.. ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
ನವೀನ್ಗೆ ಶ್ರದ್ಧಾಂಜಲಿ: ಬಿಟಿಎಂ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ಮೇಣದ ಬತ್ತಿ, ಭಿತ್ತಿ ಚಿತ್ರ ಹಿಡಿದು ಉಕ್ರೇನ್ನಲ್ಲಿ ರಷ್ಯಾ ದಾಳಿಗೆ ಬಲಿಯಾಗಿರುವ ವಿದ್ಯಾರ್ಥಿ ನವೀನ್ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.