ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ಜುಲೈ 2ರಂದು ನಡೆಯಲಿದೆ. ಈ ಸಂಬಂಧ ಇಂದು ಕರೆಯಲಾಗಿದ್ದ ಪೂರ್ವ ಸಿದ್ಧತಾ ಪ್ರಗತಿ ಕುರಿತ ಸಭೆ ನಡೆಯಿತು. ಈ ವೇಳೆ ಕೈ ಪಕ್ಷದ ನಾಯಕರು ಸಾಮಾಜಿಕ ಅಂತರ ಮರೆತಿದ್ದು ಕಂಡು ಬಂತು.
ಯಾವುದೇ ಕಾರ್ಯಕ್ರಮದಲ್ಲೂ 150ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಬಾರದು ಎಂಬ ಸ್ಪಷ್ಟ ಸೂಚನೆಯಿದೆ. ಆದರೂ 500ಕ್ಕೂ ಅಧಿಕ ಮಂದಿ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ಸಾಮಾನ್ಯ ಜನರಿಗಷ್ಟೇ ಸರ್ಕಾರದ ನೀತಿ ನಿಯಮಗಳು ಜನಪ್ರತಿನಿಧಿಗಳಲ್ಲ ಎಂಬ ಸಂದೇಶ ರವಾನಿಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗು ಕಾರ್ಯಾಧ್ಯಕ್ಷರು ಸಭೆಯಲ್ಲಿದ್ದರು.
ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು ನೆಪಮಾತ್ರಕ್ಕೆ ಕೆಲ ನಾಯಕರು ಸ್ಯಾನಿಟೈಸರ್ ಉಪಯೋಗಿಸುತ್ತಿದ್ದುದು ಕಾಣಿಸಿತು. ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷರು ಖುದ್ದು ಮಾಸ್ಕ್ ಧರಿಸದೇ ಆಗಮಿಸುವ ಮೂಲಕ ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದರು.
ಬೆಂಗಳೂರು ನಗರದಲ್ಲಿ ಕೊರೊನಾ ಮತ್ತಷ್ಟು ಭೀತಿ ಹುಟ್ಟಿಸಿದೆ. ಇಷ್ಟೊಂದು ಸಂಖ್ಯೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ಸೇರುವ ಮೂಲಕ ಕಾಂಗ್ರೆಸ್ ನಾಯಕರು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದರು. ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ಡೌನ್ ಘೋಷಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದರೆ, ಇತ್ತ ಪ್ರತಿಪಕ್ಷ ಜವಾಬ್ದಾರಿ ಮರೆತು ಈ ರೀತಿ ವರ್ತಿಸಿದ್ದು ಅಚ್ಚರಿ ಮೂಡಿಸತು.