ಬೆಂಗಳೂರು :ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಕಾಂಗ್ರೆಸ್ ನವ ಸಂಕಲ್ಪ ಶಿಬಿರವು 2ನೇ ದಿನವೂ ಮುಂದುವರೆದಿದೆ. 2023ರ ವಿಧಾನಸಭಾ ಚುನಾವಣೆ ಸಿದ್ಧತೆ ಹಾಗೂ ಕಾರ್ಯತಂತ್ರದ ಬಗ್ಗೆ ಇಂದು ಸಹ ಚರ್ಚೆಮುಂದುವರೆದಿದೆ. ಪಕ್ಷ ಸಂಘಟನೆಯಲ್ಲಿ ಮಾಡಬೇಕಾದ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗಲಿದೆ. ಚುನಾವಣೆಗೆ ಬಾಕಿ ಇರುವ 10 ತಿಂಗಳಲ್ಲಿ ಸರ್ಕಾರದ ವಿರುದ್ಧ ಮಾಡಬೇಕಾದ ಪ್ರತಿಭಟನೆಗಳು ಮತ್ತು ಹೋರಾಟದ ಬಗ್ಗೆ ಚರ್ಚೆ ನಡೆಯಲಿದೆ.
ಪಂಚಾಯತ್ ಮತ್ತು ಬೂತ್ ಮಟ್ಟದವರೆಗೂ ಸರ್ಕಾರದ ವೈಫಲ್ಯಗಳನ್ನು ತೆಗೆದುಕೊಂಡು ಹೋಗುವ ಬಗ್ಗೆ ಚಿಂತನೆ ನಡೆಸಲಿರುವ ನಾಯಕರು, ವಿಶೇಷ ಕಾರ್ಯತಂತ್ರ ಹೆಣೆಯುವ ಸಂಬಂಧ ಚರ್ಚಿಸಲಿದ್ದಾರೆ. ಇಂದಿನ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೇವಾಲಾ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಲವರು ನಾಯಕರು ಭಾಗಿಯಾಗಿದ್ದಾರೆ.
ದೆಹಲಿಯಿಂದ ವಾಪಸಾದ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೇರವಾಗಿ ಸಭೆ ನಡೆಯುತ್ತಿರುವ ಖಾಸಗಿ ರೆಸಾರ್ಟ್ಗೆ ಆಗಮಿಸಿದ್ದಾರೆ. ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿಯನ್ನು ಕಣದಿಂದ ಹಿಂಪಡೆಯುವ ಬಗ್ಗೆ ಚರ್ಚೆಗೆ ತೆರಳಿದ್ದ ಖರ್ಗೆ, ಹೈಕಮಾಂಡ್ ನಾಯಕರ ಉತ್ತರ ಪಡೆದು ವಾಪಸಾಗಿದ್ದಾರೆ. ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಲಾಗಿದ್ದು, ತಮ್ಮ ಚರ್ಚೆಯಲ್ಲಿ ಕೇಳಿಬಂದ ಅಭಿಪ್ರಾಯವನ್ನು ವಿವರಿಸಲಿದ್ದಾರೆ.
ನಿನ್ನೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಖರ್ಗೆ ಸುದೀರ್ಘ ಚರ್ಚೆ ನಡೆಸಿದ್ದರು. ರಾಜ್ಯಸಭೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಇಂದು ಕಡೆಯ ದಿನವಾಗಿದೆ. ಸದ್ಯ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ತಮ್ಮ ಎರಡನೇ ಅಭ್ಯರ್ಥಿಯನ್ನು ಕಣದಲ್ಲಿ ಮುಂದುವರಿಸಬೇಕೋ ಇಲ್ಲವೋ ಎಂಬುದನ್ನು ನಾಯಕರು ತೀರ್ಮಾನಿಸಲಿದ್ದಾರೆ.