ಬೆಂಗಳೂರು :ಕಾಂಗ್ರೆಸ್‍ನಲ್ಲಿ ಸುಳ್ಳನ್ನೇ ಹೇಳುವವರಿಗೆ ಮಾತ್ರ ಅವಕಾಶ ಇದೆ. ಆ ಪಕ್ಷದಲ್ಲಿದ್ದ ನಾನು ಸತ್ಯ ಹೇಳಲು ಬಿಜೆಪಿಗೆ ಬಂದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೂ ಸುಳ್ಳು ಹೇಳಿದ್ದನ್ನು ನಾನು ನೋಡಿರಲಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಬಾಯಿಂದ ಕಾಂಗ್ರೆಸ್‍ನವರು ಸುಳ್ಳು ಹೇಳಿಸಿದ್ದಾರೆ.
ದಲಿತ ವಿಚಾರವನ್ನು ತಂದಿದ್ದಾರೆ. ಪಂಜಾಬ್‍ನ ದಲಿತ ಸಿಎಂ ಅವರನ್ನು ಪದಚ್ಯುತಗೊಳಿಸಲು ಪ್ರಧಾನಿ ಹೀಗೆ ಮಾಡಿದ್ದಾರೆ ಎಂದಿದ್ದಾರೆ. ಇದು ಆಕ್ಷೇಪಾರ್ಹ ಎಂದು ಬಿಜೆಪಿ ಎಸ್ಸಿ (ಪರಿಶಿಷ್ಟ ಜಾತಿ) ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಜಾಬ್‍ನಲ್ಲಿ ಪ್ರಧಾನಿಯವರ ಭೇಟಿ ವೇಳೆ ಭದ್ರತಾ ವೈಫಲ್ಯದ ಕುರಿತು ಮಲ್ಲಿಕಾರ್ಜುನ ಖರ್ಗೆಯವರು ಸುಳ್ಳು ಹೇಳಿದ್ದು, ಕಾಂಗ್ರೆಸ್‍ನವರೇ ಖರ್ಗೆ ಬಾಯಿಂದ ಸುಳ್ಳು ಹೇಳಿಸಿದ್ದಾರೆ. ಖಲಿಸ್ತಾನ ಮತ್ತು ಪಾಕಿಸ್ತಾನದ ಜೊತೆ ಪಂಜಾಬ್ ಸರ್ಕಾರ ಕೈಜೋಡಿಸಿದೆ. ಈ ಘಟನೆಯನ್ನು ದೇಶದ ಎಲ್ಲ ಪ್ರಜೆಗಳು ಖಂಡಿಸಬೇಕು ಎಂದರು.
ಅಂತಾರಾಷ್ಟ್ರೀಯ ಪಿತೂರಿ..ಭದ್ರತಾ ವಿಫಲತೆಯು ಕ್ರಾಸ್ ಬಾರ್ಡರ್ ಟೆರರಿಸಂನ ಒಂದು ಭಾಗ. ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪರ ಮಾತನಾಡುತ್ತಾರೆ. ಪಾಕ್ ಜೊತೆ ಸೇರಿ ಈ ಕೃತ್ಯವನ್ನು ಪಂಜಾಬ್ ಸರ್ಕಾರ ಮತ್ತು ಕಾಂಗ್ರೆಸ್‍ನವರು ಮಾಡಿದ್ದಾರೆ. ಇದರ ಹಿಂದೆ ಅಂತಾರಾಷ್ಟ್ರೀಯ ಪಿತೂರಿ ಇದೆ ಎಂದು ಆರೋಪಿಸಿದರು.
ಈ ಆರೋಪ ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಖರ್ಗೆಯವರನ್ನು ಪ್ರಶ್ನಿಸಿದ ನಾರಾಯಣಸ್ವಾಮಿ, ಪ್ರಧಾನಿಯವರು ಬರುವ ಮೊದಲು ಸರ್ವೇ ಮಾಡಿರ್ತಾರೆ. ಪಂಜಾಬ್ ಸಿಎಂ ರೈತರ ಮುಂದೆ ನಿಂತು ಮಾತನಾಡುವುದು ಅವಶ್ಯಕತೆ ಇತ್ತೇ? ಪ್ರಧಾನಿ ಬರುವಾಗ ಹೋರಾಟ, ಪ್ರತಿಭಟನೆಗೆ ಅವಕಾಶವಿಲ್ಲ. ಪಂಜಾಬ್‍ನಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಸಿಎಂ, ಮುಖ್ಯ ಕಾರ್ಯದರ್ಶಿ ಬರದಿರುವುದು ಏಕೆ? ಎಂದು ಪ್ರಶ್ನಿಸಿದರು.