ಬೆಂಗಳೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಚಾರ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಏಕಾಂಗಿಯಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಲು ಸಿದ್ದರಾಮಯ್ಯಗೆ ಪುರುಸೊತ್ತಿಲ್ಲ. ಉಪ ಚುನಾವಣೆ ಜರುಗುವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವಲ್ಲಿ ನಿರತರಾಗಿದ್ದು, ಒಮ್ಮೆಯೂ ಶಿವಾಜಿನಗರದತ್ತ ಮುಖ ಹಾಕಿಲ್ಲ. ಆದರಿಂದು ಟ್ವಿಟರ್ನಲ್ಲಿ ರಿಜ್ವಾನ್ ಅರ್ಷದ್ ಅವರನ್ನು ಹೊಗಳಿದ್ದು, ಪ್ರಚಾರಕ್ಕೆ ಬರಲಾಗದಿದ್ದರೂ ಹೊಗಳೋದು ಬಿಟ್ಟಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ರಿಜ್ವಾನ್ ಅರ್ಷದ್ ಅವರಂತಹ ಯುವಕರು ವಿಧಾನಸಭೆ ಪ್ರವೇಶಿಸುವುದು ಒಂದು ಸರಿಯಾದ ದಿಕ್ಕಿನಲ್ಲಿ ವ್ಯವಸ್ಥೆ ಸಾಗುತ್ತಿದೆ ಎನ್ನುವುದಕ್ಕೆ ಉತ್ತಮ ಹೆಜ್ಜೆಯಾಗಿದೆ. ಶಿವಾಜಿನಗರ ಅಭಿವೃದ್ಧಿ ಬಗೆಗಿನ ಅವರ ಬದ್ಧತೆ ಹಾಗೂ ಛಲ ಅತ್ಯಂತ ಪ್ರಾಮಾಣಿಕವಾಗಿದ್ದು, ಇದು ಕಾಂಗ್ರೆಸ್ ತತ್ವ ಶಾಸ್ತ್ರಕ್ಕೆ ಅನುಗುಣವಾಗಿದೆ ಎಂದು ಸಿದ್ದರಾಮಯ್ಯ ಕೊಂಡಾಡಿದ್ದಾರೆ.
ಕ್ಷೇತ್ರಕ್ಕೆ ಬರಲು ಆತಂಕ?
ಚುನಾವಣಾ ಉಸ್ತುವಾರಿ ಬಿ.ಕೆ.ಹರಿಪ್ರಸಾದ್ ಅವರು ಕ್ಷೇತ್ರಕ್ಕೆ ಇದುವರೆಗೂ ಕಾಲಿರಿಸಿಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಪ್ರಚಾರಕ್ಕೆ ಹೋಗಿದ್ದು ಬಿಟ್ಟರೆ ಬೇರೆ ಯಾರೂ ಇತ್ತ ಮುಖ ಮಾಡಿಲ್ಲ. ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕೂಡ ಈ ಕಡೆ ತಿರುಗಿ ನೋಡಿಲ್ಲ.
ಸಿದ್ದರಾಮಯ್ಯ ಇಂದು ಟ್ವೀಟ್ ಮಾಡಿದ್ದು ಹೊರತುಪಡಿಸಿದರೆ ಬೇರೆ ಯಾವುದೇ ರೀತಿಯಲ್ಲೂ ರಿಜ್ವಾನ್ ಪರ ದನಿ ಎತ್ತಿಲ್ಲ, ಪ್ರಚಾರಕ್ಕೆ ಹೋಗಿಲ್ಲ. ಇದಕ್ಕೆಲ್ಲ ಕಾರಣ ಐಎಂಎ ಹಗರಣದ ಕಳಂಕ ತಮ್ಮ ತಲೆಗೆ ಅಂಟಬಹುದು ಎಂಬುದಾಗಿದೆ ಎನ್ನಲಾಗುತ್ತಿದೆ. ಈ ಹಗರಣದಲ್ಲಿ ರೋಷನ್ ಬೇಗ್, ರಿಜ್ವಾನ್ ಅರ್ಷದ್, ಜಮೀರ್ ಅಹಮ್ಮದ್ ಹೆಸರು ಕೇಳಿಬಂದಿತ್ತು. ಇವರಿಗೆ ಹಿರಿಯ ಕಾಂಗ್ರೆಸ್ ನಾಯಕರ ಬೆಂಬಲವಿದೆ ಎಂಬ ಮಾತು ಕೇಳಿಬಂದಿತ್ತು. ಇಲ್ಲಿನ ಸ್ಥಳೀಯ ನಾಯಕರು ಸಹ ವಿರುದ್ಧವಾಗಿದ್ದಾರೆ.ಇದರಿಂದಲೇ ನಾಯಕರು ಇತ್ತ ಸುಳಿದಿಲ್ಲ ಎನ್ನಲಾಗ್ತಿದೆ.
ಕೊನೆಗೂ ಮನಸ್ಸು ಮಾಡಿದ ನಾಯಕರು
ಸಾಕಷ್ಟು ಒತ್ತಡ ಹಾಗೂ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮಾಡಿಕೊಂಡ ಮನವಿ ಮೇರೆಗೆ ನಾಳೆ ಶಿವಾಜಿನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ. ಒತ್ತಾಯ ಮಾಡಿ ಟಿಕೆಟ್ ಕೊಟ್ಟ ನಾಯಕರು ಪ್ರಚಾರಕ್ಕೆ ಬರದೇ ಕೈ ಕೊಟ್ಟಿದ್ದರಿಂದ ಕಂಗಾಲಾಗಿರುವ ರಿಜ್ವಾನ್ ಅವರಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿ ಗೋಚರಿಸಿದೆ.