ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ, ಸಿಬಿಐ, ಇಡಿ ದಾಳಿ ಹೊಸದೇನೂ ಅಲ್ಲ. ಪ್ರತಿ ಬಾರಿ ಯಾವುದೇ ನಾಯಕರ ಮೇಲೆ ದಾಳಿ ನಡೆದಾಗಲೂ ಒಂದಿಷ್ಟು ನಾಯಕರು ಆತಂಕ, ಉದ್ವೇಗ ಹಾಗೂ ಭಯಭೀತರಾಗುತ್ತಾರೆ.
ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿ ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ನಿಧಾನವಾಗಿ ವಿಧಾನ ಮಂಡಲ ಅಧಿವೇಶನ ಕರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು, ಬಿಎಸ್ವೈ ಸರ್ಕಾರದಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರವನ್ನು ತನಿಖೆಗೆ ಒಪ್ಪಿಸುವಂತೆ ಒತ್ತಡ ಹೇರಲು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿಕೊಂಡಿದ್ದರು. ಆದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ನಿವಾಸದ ಮೇಲೆ ಇಂದು ಜಾರಿ ನಿರ್ದೇಶನಾಲಯದ ದಾಳಿ ನಡೆದಿದೆ. ಸಹಜವಾಗಿ ಇದರ ಮೇಲಿನ ಅನುಮಾನ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವೇ ಇರಲಿದೆ.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು, ಇವರು ನಡೆಸುವ ಅನಾಚಾರಗಳನ್ನು ಖಂಡಿಸುವ ಪ್ರತಿಪಕ್ಷ ನಾಯಕರ ಬಾಯಿ ಕಟ್ಟಿಹಾಕಲು ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದೀಗ ಜಮೀರ್ ನಿವಾಸದ ಮೇಲೆ ಮತ್ತೊಂದು ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿದ್ದು, ತಮ್ಮ ಬಾಯಿ ಮುಚ್ಚಿಸುವ ಯತ್ನ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಮತ್ತಿತರ ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಅದೇ ರೀತಿ ಅಕ್ಕಪಕ್ಕದ ರಾಜ್ಯಗಳ ವಿವಿಧ ಪಕ್ಷದ ನಾಯಕರ ನಿವಾಸದ ಮೇಲೆ ಉತ್ತರ ಭಾರತದ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಆಗಾಗ ಐಟಿ, ಇಡಿ, ಸಿಬಿಐ ದಾಳಿ ನಡೆಯುತ್ತಲೇ ಇದೆ. ಇದೆಲ್ಲಾ ಸಂದರ್ಭದಲ್ಲಿಯೂ ಕಾಂಗ್ರೆಸ್ ನಾಯಕರು ಇದು ಆಡಳಿತ ಪಕ್ಷ ತನ್ನ ಲೋಪ ಮುಚ್ಚಿಕೊಳ್ಳಲು ನಡೆಸುವ ಷಡ್ಯಂತ್ರ ಎನ್ನುತ್ತಲೇ ಬಂದಿದೆ. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿಯೂ ದಾಳಿಗಳು ನಡೆದಿದ್ದರು. ಇದು ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದಕ್ಕೆ ಸಾಕ್ಷಿ. ನಾವು ಯಾವುದೇ ಹಸ್ತಕ್ಷೇಪವನ್ನು ತನಿಖಾ ಸಂಸ್ಥೆಗಳ ವಿಚಾರದಲ್ಲಿ ಮಾಡುವುದಿಲ್ಲ ಎನ್ನುತ್ತಿದೆ.
ಸಚಿವ ಸಂಪುಟ ರಚನೆಯಾಗಿದ್ದು, ಇನ್ನೇನು ಮಳೆಗಾಲದ ಅಧಿವೇಶನ ಕರೆಯುವ ಸರ್ಕಾರದ ವಿರುದ್ಧ ಮುಗಿಬೀಳಲು ಮುಂದಾಗಿದ್ದ ಕಾಂಗ್ರೆಸ್ ನಾಯಕರಿಗೆ ಜಮೀರ್ ನಿವಾಸದ ಮೇಲಿನ ದಾಳಿ ಸಹಜವಾಗಿ ಆತಂಕ, ಉದ್ವೇಗ ಹಾಗೂ ಭಯದ ವಾತಾವರಣ ಮೂಡಿಸಿದೆ. ಬಾಯಿ ಬಿಟ್ಟರೆ ತಮ್ಮ ಮೇಲೂ ದಾಳಿ ನಡೆಯಬಹುದು ಎಂಬ ಆತಂಕ ಶುರುವಾಗಿದೆ. ಮುಂಬರುವ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿದಾಳಿ ಐಟಿ ಆತಂಕದ ನಡುವೆಯೇ ಇರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ:ಜಮೀರ್, ರೋಷನ್ ಬೇಗ್ಗೆ ED ಸಂಕಷ್ಟ: ಪ್ರತ್ಯೇಕ ತಂಡಗಳಾಗಿ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು