ಬೆಂಗಳೂರು :ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ನಾಯಕರು, ಸರ್ಕಾರ ಹಾಗೂ ಬಿಜೆಪಿ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಟ್ವೀಟ್ ಮಾಡಿ, ಕೊರೊನಾ ಪರೀಕ್ಷೆಗಳನ್ನು ಕಡಿಮೆ ನಡೆಸುವ ಮೂಲಕ ಸೋಂಕು ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿವೆ ಎಂದು ರಾಜ್ಯ ಸರ್ಕಾರಗಳು ಹೇಳುತ್ತಿರುವುದು ಇವರ ಅದಕ್ಷತೆಗೆ ಹಿಡಿದ ಕನ್ನಡಿ.
ಏಪ್ರಿಲ್ನಲ್ಲಿ 6.62 ಲಕ್ಷ ಪರೀಕ್ಷೆಗಳನ್ನು ಮಾಡಿದ್ದು, ಮೇ ವೇಳೆಗೆ ಅದನ್ನು 2.9 ಲಕ್ಷಕ್ಕೆ ತಗ್ಗಿಸಿರುವ ಸರ್ಕಾರ ತನ್ನ ಅಸಮರ್ಥತೆಯ ಮೂಲಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ.
ಕೊರೊನಾ ಪರೀಕ್ಷೆಗಳನ್ನು ಹೆಚ್ಚು ನಡೆಸದೇ ಸೋಂಕು ಇಳಿಕೆಯಾಯಿತು ಎಂದು ಹೇಳುತ್ತಿರುವ ಈ ಬೇಜವಾಬ್ದಾರಿ ಸರ್ಕಾರಕ್ಕೆ ತಪ್ಪದೇ ಪ್ರಶಸ್ತಿಯನ್ನು ಕೊಡಬೇಕು ಎಂದು ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ, ದೇಶವನ್ನೇ ಸ್ಮಶಾನ ಮಾಡಿದ ಬಿಜೆಪಿಯವರು, ಅದ್ಯಾವ ಮುಖ ಇಟ್ಟುಕೊಂಡು ನೀತಿ ಪಾಠ ಹೇಳುತ್ತಾರೋ? ಜನರ ಬದುಕನ್ನು ನಿರ್ನಾಮ ಮಾಡಿದ ಮೋದಿಯವರ ಹೆಸರು ಕೆಡಿಸಲು ಕಾಂಗ್ರೆಸ್ ಟೂಲ್ ಕಿಟ್ ಬಳಸಬೇಕೆ? ಸಿ.ಟಿ.ರವಿಯವರಿಗೆ ಪುರುಸೊತ್ತಿದ್ದರೆ, ಅಡ್ಡಾಡಿ ಬರಲಿ. ಅವರ ಪಕ್ಷದ ಕಾರ್ಯಕರ್ತರೇ ಮೋದಿಗೆ ಛೀಮಾರಿ ಹಾಕುವ ಸತ್ಯ ದರ್ಶನವಾಗುತ್ತದೆ ಎಂದಿದ್ದಾರೆ.
ಟೂಲ್‌ಕಿಟ್‌ನ ಟೂಲ್ ಆಗಿ ಬಳಸೋ ಕಲೆ ಬಿಜೆಪಿಯವರಿಗೆ ಹೇಳಿಕೊಡಬೇಕೆ? ಹಿಂದೆ ರೈತ ಚಳವಳಿಯ ದಿಕ್ಕು ತಪ್ಪಿಸಲೂ ಇದೇ ಟೂಲ್‌ಕಿಟ್ ಅಸ್ತ್ರ.
ಕೊರೊನಾ ಹೆಮ್ಮಾರಿ ಬೆಳೆಯಲು ಬಿಟ್ಟು ಹೆಸರು ಕೆಡಿಸಿಕೊಂಡಿರುವ ಮೋದಿ ಇಮೇಜ್ ಉಳಿಸಲು ಇದೇ ಟೂಲ್‌ಕಿಟ್ ಅಸ್ತ್ರ. ಸಿ.ಟಿ.ರವಿಯವರೇ ಸಾಕು ನಿಲ್ಲಿಸಿ ಈ ನಾಟಕವನ್ನು. ನಿಮ್ಮ ನಾಟಕ ನಂಬಲು ಜನರು ದಡ್ಡರಲ್ಲ ಎಂದು ಕಿಡಿಕಾರಿದ್ದಾರೆ.
ಓದಿ:ರಾಜ್ಯ ಸರ್ಕಾರದಿಂದ 1,250 ಕೋಟಿ ಪ್ಯಾಕೇಜ್ ಘೋಷಣೆ: ಸಿಎಂ ಯಡಿಯೂರಪ್ಪ