ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ಪ್ರವಾಸದಲ್ಲಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಚಟುವಟಿಕೆ ನೀರಸಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನಿರಂತರ ಹೋರಾಟ ನಡೆಸುವ ಮೂಲಕ ಕಳೆದ ತಿಂಗಳು ಸಾಕಷ್ಟು ಸುದ್ದಿಯಲ್ಲಿದ್ದ ಕಾಂಗ್ರೆಸ್ ಚಟುವಟಿಕೆ, ಕಳೆದ ಒಂದು ವಾರಗಳಿಂದ ನಗರ ಕೇಂದ್ರವನ್ನು ಬಿಟ್ಟು ರಾಜ್ಯದ ವಿವಿಧ ಭಾಗಗಳಿಗೆ ಕಾಂಗ್ರೆಸ್ ನಾಯಕರು ಪ್ರವಾಸ ಕೈಗೊಂಡ ಹಿನ್ನೆಲೆ ರಾಜಧಾನಿ ಚಟುವಟಿಕೆ ಇಲ್ಲದೆ ಬಿಕೋ ಎನ್ನುತ್ತಿದೆ.
ಒಂದು ಅಥವಾ ಎರಡು ದಿನಗಳ ಪ್ರವಾಸವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಮ್ಮಿಕೊಳ್ಳುತ್ತಿದ್ದು, ಬಹುತೇಕ ಕಾಂಗ್ರೆಸ್ ಚಟುವಟಿಕೆ ವಿವಿಧ ಜಿಲ್ಲೆಗಳಿಗೆ ಹಂಚಿಹೋಗಿದೆ. ರಾಜ್ಯ ನಾಯಕರ ಭೇಟಿಗೆ ನಗರಕ್ಕೆ ಆಗಮಿಸುತ್ತಿದ್ದ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗಿದೆ. ಪಕ್ಷದ ಮುಖಂಡರ ಸುದ್ದಿಗೋಷ್ಠಿ, ಪ್ರತಿಭಟನೆ ಕಾರ್ಯಕ್ರಮಗಳು ಹಾಗೂ ಸಭೆ ಸಹ ಗಣನೀಯವಾಗಿ ಇಳಿಕೆಯಾಗಿದೆ.
ಸಾಮಾನ್ಯವಾಗಿ ರಾಜ್ಯ ನಾಯಕರು ನಗರ ಕೇಂದ್ರದಲ್ಲಿ ಇಲ್ಲದ ಸಂದರ್ಭ ಇತರ ಪ್ರಮುಖ ನಾಯಕರು ಚಟುವಟಿಕೆಯಲ್ಲಿ ತೊಡಗುವುದು ವಾಡಿಕೆಯಾಗಿತ್ತು. 2 ಮತ್ತು 3ನೇ ಹಂತದ ನಾಯಕರು ನಗರದ ವಿವಿಧೆಡೆ ಸಮಾರಂಭದ ಸುದ್ದಿಗೋಷ್ಠಿ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ನಾಯಕರು ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಕಾಂಗ್ರೆಸ್ ಚಟುವಟಿಕೆ ಕಡಿಮೆ ಆಗಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಜವಾಬ್ದಾರಿ ನೀಡಿಕೆ:
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ನೆರೆ ಸಮಸ್ಯೆ ತಲೆದೋರಿದೆ. ಇದರ ಜೊತೆ ಜೊತೆಗೆ ರಾಜ್ಯದ ಕೆಲ ಜಿಲ್ಲೆಗಳು ಬರ ಪೀಡಿತವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿವಿಧ ಸಮಿತಿಗಳನ್ನು ರಚಿಸುವ ಸಲುವಾಗಿ ಕಾರ್ಯ ಪ್ರವೃತ್ತರಾಗಿದ್ದು, ಆಯ್ಕೆಗೆ ತಮ್ಮನ್ನು ಪರಿಗಣಿಸಲಿ ಎಂಬ ಉದ್ದೇಶದಿಂದ ಹಲವು ನಾಯಕರು ತಮ್ಮ ವ್ಯಾಪ್ತಿಯಲ್ಲಿ ತೀವ್ರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ, ಮಾಜಿ ಸಚಿವರಿಗೆ ಹಾಲಿ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿವಿಧ ಜವಾಬ್ದಾರಿಗಳನ್ನು ವಹಿಸಿದ್ದು, ಇದನ್ನ ನಿಭಾಯಿಸುವ ಸಲುವಾಗಿ ಪಕ್ಷದ ಕೆಲ ನಾಯಕರು ಬೇರೆಡೆ ತೆರಳಿದ್ದಾರೆ.