ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ಸಜ್ಜಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಧ್ಯಮಗಳಿಗೆ ನೀಡಿರುವ ಹರ್ ಘರ್ ತಿರಂಗಾ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೆಸರು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಜಾಹೀರಾತು ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಪ್ರತಿಕ್ರಿಯಿಸಿ, ಸಿಎಂ ಬೊಮ್ಮಾಯಿ ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶರಾದಂತೆ ಕಾಣುತ್ತಿದೆ. ನೆಹರು ಫೋಟೋ ಮರೆತಿರುವುದು ಬೊಮ್ಮಾಯಿಯವರ ತಂದೆ ಎಸ್ಆರ್ ಬೊಮ್ಮಾಯಿ ಅವರಿಗೆ ಮಾಡಿದ ಅವಮಾನ. ಎಸ್.ಆರ್ ಬೊಮ್ಮಾಯಿ ಅವರ ರಾಜಕೀಯ ಗುರು ಎಂ.ಎನ್ ರಾಯ್ ಇವರಿಬ್ಬರೂ ನೆಹರು ಬೆಂಬಲಿಗರಾಗಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿ, "ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ. ನೆಹರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಬಳಿಕ ದೇಶದ ಪ್ರಧಾನಿಯಾಗಿದ್ದಾರೆ. ಈಗಿರುವ ಸಿಎಂ ಅವರ ತಂದೆ ಕೂಡ ಮುಖ್ಯಮಂತ್ರಿಯಾಗಿದ್ದರು. ಹಾಗಂತ ಎಸ್.ಆರ್ ಬೊಮ್ಮಾಯಿ ಸಿಎಂ ಆಗಿರಲಿಲ್ಲ ಅಂತಾ ಹೇಳೋಕೆ ಆಗುತ್ತಾ?. ಬಸವರಾಜ ಬೊಮ್ಮಾಯಿಂದ ಈ ತರಹ ನಿರೀಕ್ಷೆ ಮಾಡಿರಲಿಲ್ಲ" ಎಂದಿದ್ದಾರೆೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು. ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ?. ನೆಹರು ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಬದುಕಿನ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು ಎನ್ನುವುದು ನೆನಪಿರಲಿ. ಅವರು ನಿಮ್ಮ ವಿ.ಡಿ.ಸಾವರ್ಕರ್ ಅವರಂತೆ ಜೈಲಿನಿಂದ ಬಿಡುಗಡೆಗೊಳ್ಳಲು ಬ್ರಿಟಿಷರ ಕಾಲು ಹಿಡಿದು ಕ್ಷಮೆ ಕೋರಿದ ಹೇಡಿ ಅಲ್ಲ" ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಸ್ವಾತಂತ್ರ್ಯ ನಡಿಗೆಗೆ ವಾಹನ ನಿಲುಗಡೆ ಅವಕಾಶ, ಮೆಟ್ರೋ ಸಂಚಾರ ವ್ಯವಸ್ಥೆ ಕಲ್ಪಿಸಿದ ಕಾಂಗ್ರೆಸ್