ರಾಮನಗರ:ರಾಜ್ಯ ಕಾಂಗ್ರೆಸ್ ನಾಯಕರು ಎರಡನೇ ದಿನದ ಪಾದಯಾತ್ರೆ ಮುಗಿಯುತ್ತಿದ್ದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಮೇಕೆದಾಟು ಸಂಗಮ ಸ್ಥಳದಿಂದ ಪಾದಯಾತ್ರೆ ಆರಂಭಿಸಿದ್ದ ಕಾಂಗ್ರೆಸ್ ನಾಯಕರು ಸೋಮವಾರ ಕನಕಪುರ ತಲುಪಿದ್ದಾರೆ. ಈ ವೇಳೆ ಸಂಸದ ಡಿಕೆ ಸುರೇಶ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಕಾರ್ಯಧ್ಯಕ್ಷ ರಾಮಲಿಂಗರೆಡ್ಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಅಶ್ವಥ್ ನಾರಾಯಣ್ಗೆ ಸಂಸದ ಡಿ.ಕೆ.ಸುರೇಶ್ ಟಾಂಗ್ ಕೊಟ್ಟಿದ್ದು, ನಿಮಗೆ ಗಂಡಸ್ಥನ ಇದ್ದರೆ ಪ್ರಧಾನಿ ಮುಂದೆ ತೋರಿಸಿ. ಈ ಯೋಜನೆಯನ್ನ ಅನುಷ್ಠಾನ ಮಾಡಿ. ನಿಮ್ಮ ಪಾದಪೂಜೆಯನ್ನ ನಾನು ಮಾಡ್ತೇನೆ. ಇದು ಪಕ್ಷವಲ್ಲ, ರಾಜ್ಯದ ಯೋಜನೆ. ಇದು ನಮ್ಮ ನೀರು, ನಮ್ಮ ಯೋಜನೆ. ಗಂಡಸ್ಥನ ವೇದಿಕೆ ಮೇಲಲ್ಲ ತೋರಿಸೋದು. ನಾವು ಗಂಡಸರು. ಅದಕ್ಕಾಗಿಯೇ ಎದೆ ಎತ್ತಿ ಹೋರಾಟ ನಡೆಸ್ತಿದ್ದೇವೆ ಎಂದರು.
'ಸೋಂಕಿತರ ಸಾವಿಗೆ ಮೋದಿ ಕಾರಣ': ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯವರು ಜನರ ಪರವಿಲ್ಲ. ಅವರಲ್ಲಿ ಯಾವುದೇ ಕಾರ್ಯಕ್ರಮವಿಲ್ಲ. ಜಾತಿ ಮುಂದಿಟ್ಟು ರಾಜಕೀಯ ಮಾಡ್ತಾರೆ. ಈ ಯಾತ್ರೆ ತಡೆಯೋಕೆ ಇನ್ನಿಲ್ಲದ ಪ್ರಯತ್ನ ಮಾಡ್ತಾ ಇದ್ದಾರೆ. ಕೊರೊನಾ ತೋರಿಸಿ ತಡೆಯೋಕೆ ಹೊರಟಿದ್ದಾರೆ. ದೇಶಕ್ಕೆ ಕೊರೊನಾ ಬಂದಿದ್ದೇ ಮೋದಿಯಿಂದ. ಕೊರೊನಾಗೆ 42 ಲಕ್ಷ ಜನ ದೇಶದಲ್ಲಿ ಸತ್ತಿದ್ದಾರೆ. ಭೂಕಂಪ, ಸುನಾಮಿಯಿಂದ ಜನ ಸತ್ತಿಲ್ಲ. ಜನರ ಸಾವಿಗೆ ಬಿಜೆಪಿಯೇ ಕಾರಣ. ನರೇಂದ್ರ ಮೋದಿಯವರೇ ಕಾರಣ. ಇಷ್ಟೆಲ್ಲಾ ಸಾವುನೋವಿಗೆ ಮೋದಿ ಕಾರಣ. ಪಾದಯಾತ್ರೆ ತಡೆಯೋಕೆ ಏನೆಲ್ಲ ಮಾಡ್ತಿದ್ದಾರೆ. ಜನರ ನೀರಿಗಾಗಿ ಅಡೆತಡೆ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.