ಬೆಂಗಳೂರು: ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ನಾಯಕರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಿನ್ನೆ(ಭಾನುವಾರ) ಮಹತ್ವದ ಸಭೆ ನಡೆಸಿದರು. ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಬಿಬಿಎಂಪಿ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಗೆಲುವಿಗೆ ಅಗತ್ಯವಿರುವ ಕಾರ್ಯತಂತ್ರ ರೂಪಿಸುವ ಸಂಬಂಧ ಹಾಗೂ ಕಾರ್ಯಕರ್ತರ ಮನೋಬಲ ಹೆಚ್ಚಿಸಲು ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಈ ಸಂದರ್ಭ ಚರ್ಚಿಸಲಾಯಿತು.
ಬಿಬಿಎಂಪಿ ಮರುವಿಂಗಡಣೆ ಮಾಡಿ ಹೆಚ್ಚುವರಿ ವಾರ್ಡ್ಗಳನ್ನು ರೂಪಿಸಲಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಅಲ್ಲದೇ, ಅತ್ಯಂತ ಪ್ರತಿಷ್ಠೆಯ ಸಂಕೇತವಾಗಿದೆ. ಕಳೆದ ಅವಧಿಯಲ್ಲಿ ಐದು ವರ್ಷಗಳ ಪೈಕಿ ನಾಲ್ಕು ವರ್ಷ ಜೆಡಿಎಸ್ ಜೊತೆ ಮೈತ್ರಿ ಅಧಿಕಾರ ನಡೆಸಿದ ಕಾಂಗ್ರೆಸ್ಗೆ ಈ ಸಾರಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಗುರಿ ಇದೆ. ಆದರೆ, ಈ ಮಾರ್ಗ ಅಷ್ಟು ಸುಗಮವಾಗಿಲ್ಲ.
ಆಡಳಿತ ಪಕ್ಷವಾಗಿರುವ ಬಿಜೆಪಿಯ ಪ್ರತಿಸ್ಪರ್ಧೆ ದೊಡ್ಡದಿದೆ. ಜೆಡಿಎಸ್ ಪಕ್ಷ ಸಹ ನಿರ್ಣಾಯಕ ಪಾತ್ರ ವಹಿಸಲಿದೆ. 2023ರಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಕಾಂಗ್ರೆಸ್ಗೆ ಹೆಚ್ಚಿನ ಸ್ಥಾನಗಳು ಬಿಬಿಎಂಪಿ ಚುನಾವಣೆ ಗೆಲುವು ಅತ್ಯಂತ ಅನುಕೂಲಕರವಾಗಿ ಲಭಿಸಲಿದೆ. ರಾಜ್ಯದ ರಾಜಧಾನಿ ತಮ್ಮ ಹಿಡಿತದಲ್ಲಿದ್ದರೆ, 224 ಕ್ಷೇತ್ರಗಳ ಪೈಕಿ ಪ್ರಮುಖ 28 ಕ್ಷೇತ್ರಗಳನ್ನು ಗೆಲ್ಲುವುದು ಸುಲಭವಾಗಲಿದೆ.
ಅಲ್ಲದೇ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಬಿಬಿಎಂಪಿ ಹಿಡಿತ ಕಾಂಗ್ರೆಸ್ಗೆ ಲಭಿಸಿದರೆ ಅದೊಂದು ಧನಾತ್ಮಕ ಪರಿಣಾಮವನ್ನು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಬೀರಲಿದೆ ಎಂಬುದು ಕಾಂಗ್ರೆಸ್ ನಾಯಕರ ಆಶಯವಾಗಿದೆ.