ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳೆದ ತಿಂಗಳು ನೇಮಕಗೊಂಡಿರುವ ನೂತನ ಪದಾಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಮಹತ್ವದ ಸಭೆ ನಡೆಸಿದರು. ಕಳೆದ ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ನೇಮಕಕ್ಕೆ ಅಂಕಿತ ಬಿದ್ದಿದ್ದು, ಮೊದಲ ಹಂತದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. 40 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ, 109 ಮಂದಿಗೆ ಪ್ರಧಾನಕಾರ್ಯದರ್ಶಿ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ.
ಕಳೆದ ಏಪ್ರಿಲ್ 9ರಂದು ಪಕ್ಷದ ಹೈಕಮಾಂಡ್ ಆದೇಶ ಹೊರಡಿಸಿದೆ. ಎಲ್ಲರೂ ಅಧಿಕಾರ ವಹಿಸಿಕೊಂಡಿದ್ದು ಮುಂಬರುವ ದಿನಗಳಲ್ಲಿ ಇವರ ಕಾರ್ಯನಿರ್ವಹಣೆ ಸಂಬಂಧ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಇಂದು ಸಭೆ ನಡೆಯಿತು. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಧೃವನಾರಾಯಣ್, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮುಖಂಡ ರುದ್ರಪ್ಪ ಲಮಾಣಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೆಪಿಸಿಸಿಯ ನೂತನ ಪದಾಧಿಕಾರಿಗಳು 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಹಾಗೂ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಸಂದರ್ಭ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಯಾರಿಗೆ ಯಾವ ಜವಾಬ್ದಾರಿ ಹೊಣೆಗಾರಿಕೆ ನೀಡಬೇಕು ಎಂಬ ಕುರಿತು ಈ ಸಂದರ್ಭ ಗಂಭೀರ ಚರ್ಚೆ ನಡೆದಿದೆ.
ಕೆಪಿಸಿಸಿಯ ನೂತನ ಪದಾಧಿಕಾರಿಗಳು 'ಸರ್ಕಾರ ಹಗರಣದ ಸರ್ಕಾರ' : ಪಿಎಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಭೆಗೆ ತೆರಳುವ ಮುನ್ನ ಮಾತನಾಡಿ, ಈ ಸರ್ಕಾರ ಹಗರಣದ ಸರ್ಕಾರ. ಕೇವಲ ಪಿಎಸ್ಐ ನೇಮಕಾತಿಯ ಅಕ್ರಮವಷ್ಟೇ ಅಲ್ಲ. ಎಲ್ಲ ನೇಮಕಾತಿಗಳಲ್ಲೂ ಅಕ್ರಮವಾಗಿದೆ. ಶಿಕ್ಷಕರು, ಉಪನ್ಯಾಸಕರ ನೇಮಕಾತಿಯಲ್ಲೂ ಅಕ್ರಮವಾಗಿದೆ. ಹೈಕೋರ್ಟ್ ನ್ಯಾಯಾಧೀಶರ ನಿಗಾದಲ್ಲಿ ತನಿಖೆ ನಡೆಯಬೇಕು. ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಯಾರೇ ಇರಲಿ ತಪ್ಪಿತಸ್ಥರ ಮೇಲೆ ಕ್ರಮವಾಗಬೇಕು. ಡಿಕೆಶಿ ಜೊತೆ ದಿವ್ಯಾ ಹಾಗರಗಿ ಫೋಟೋ ವೈರಲ್ ವಿಚಾರ ಮಾತನಾಡಿ, ದೊಡ್ಡವರೆಂದ ಮೇಲೆ ಹಲವರು ಬರ್ತಾರೆ. ಹಾಗಂತ ಅಕ್ರಮ ಮಾಡಿ ಅಂತ ಹೇಳ್ತಾರಾ? ಎಂದು ಪ್ರಶ್ನೆ ಹಾಕಿದರು.
ಇದನ್ನೂ ಓದಿ:ರಾಜ್ಯ ಸಚಿವ ಸಂಪುಟ: ವಿಸ್ತರಣೆಯೋ? ಪುನರ್ ರಚನೆಯೋ? ಬಿಜೆಪಿ ಹೈಕಮಾಂಡ್ನ ನಿಗೂಢ ನಡೆ