ಬೆಂಗಳೂರು: ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಇದೇ ವೇಳೆ ಜೆಡಿಎಸ್ ಮುಖಂಡ ಹನುಮತೇಗೌಡ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಇಂದು ಏನಾದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದರೆ, ಅದು ನಮ್ಮ ಸರ್ಕಾರ ನೀಡಿದ್ದ ಅನುದಾನದಲ್ಲಿ. ಏಕೆಂದರೆ ಈಗಿನ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ವ್ಯಕ್ತಿ ಎಂದರು.
ಹೆಬ್ಬಾಳದಲ್ಲಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ವಾತಂತ್ರ್ಯ ಭಾರತ ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನೇ ಕಂಡಿಲ್ಲ. ಅಚ್ಚೇ ದಿನ ಬರುತ್ತದೆ ಎಂದು ಹೇಳಿ ಜನರ ಸುಲಿಗೆ ಮಾಡುತ್ತಿದ್ದಾರೆ. ಜನರ ದುಡ್ಡನ್ನು ಜನರಿಗೆ ಖರ್ಚು ಮಾಡಲು ಬಿಜೆಪಿ ಅವರಿಗೆ ಯಾಕೆ ಹೊಟ್ಟೆಯುರಿ?. ಬೆಂಗಳೂರು ನಗರ ಒಂದರಲ್ಲೇ 198 ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಿದ್ದೆವು. ಈಗಿನ ಸರ್ಕಾರ ಅದನ್ನು ಮುಚ್ಚುತ್ತಿದೆ.
ಯಡಿಯೂರಪ್ಪ ಅವರ ಸರ್ಕಾರ ಕೂಡ ಈ ಕ್ಯಾಂಟೀನ್ಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಇವರೆಲ್ಲಾ ರಾಜಾ ಹುಲಿ ಅಂತೆ. ಯಾಕೆ ಕ್ಯಾಂಟೀನ್ ಮುಚ್ಚಿದ ಸಾಧನೆಗಾ ಈ ಬಿರುದು?. ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ಬೇರೆ ಸಿಕ್ಕಿದೆ. ಲೂಟಿ ಹೊಡೆದಿದ್ದು ಬಿಟ್ರೆ ಯಾವುದಾದರೂ ಜನಪರ ಯೋಜನೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಜೆಡಿಎಸ್ ಮಾತೆತ್ತಿದರೆ ನಮ್ಮದು ಜಾತ್ಯಾತೀತ ಪಕ್ಷ ಎನ್ನುತ್ತದೆ. ಜಾತ್ಯಾತೀತ ಬರೀ ಹೆಸರಿನಲ್ಲಷ್ಟೇ ಉಳಿದಿದೆ. ಸಿದ್ಧಾಂತವಾಗಿ ಅಲ್ಲ. ಇದೇ ಕಾರಣಕ್ಕೆ ಹನುಮಂತೇಗೌಡ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್ ಅವಕಾಶವಾದಿ ರಾಜಕಾರಣ. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕೆ ನಾವು 80 ಶಾಸಕರಿದ್ದರೂ, ಅವರಿಗೆ ಬೆಂಬಲ ಕೊಟ್ಟು, ಅವರನ್ನೇ ಮುಖ್ಯಮಂತ್ರಿ ಮಾಡಲು ಒಪ್ಪಿದ್ದೆವು.
ನಂಜನಗೂಡಿನಲ್ಲಿ ದೇವಸ್ಥಾನ ಒಡೆದವರು ಬಿಜೆಪಿಯವರೇ. ಅದರ ವಿರುದ್ಧ ಪ್ರತಿಭಟನೆ ಮಾಡುವವರು ಬಿಜೆಪಿಯವರೇ. ತಮ್ಮೆಲ್ಲರಲ್ಲಿ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ. 2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತು ಬಿಸಾಕಿ. ಜೆಡಿಎಸ್ ಬಹುಮತ ಪಡೆದು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಪಕ್ಷ ಅಲ್ಲ. ಅವರಿಗೆ ಯಾರಾದರೂ ನಡೆಯುತ್ತದೆ. ನಮ್ಮ ಸರ್ಕಾರದ ಶೂ ಭಾಗ್ಯ, ಪಶು ಭಾಗ್ಯ, ಅನ್ನ ಭಾಗ್ಯ, ಕೃಷಿ ಭಾಗ್ಯ, ವಿದ್ಯಾಸಿರಿ ಯೋಜನೆಗಳ ಫಲ ಯಾವುದೇ ಜಾತಿ- ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನರಿಗೂ ತಲುಪಿತ್ತು. ಇದರಲ್ಲಿ ಜಾತಿಬೇಧ ಇದೆಯಾ? ಎಂದರು.
ದೇಶ ಒಡೆಯುವ ಬಿಜೆಪಿ ಸರ್ಕಾರ ತೊಲಗದೆ ಹೋದರೆ ದೇಶ ಉದ್ಧಾರವಾಗಲ್ಲ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದೇ ಇದ್ದ ಆರ್ಎಸ್ಎಸ್ ಮತ್ತು ಸಂಘ ಪರಿವಾರ ಇಂದು ಮಾತೆತ್ತಿದ್ದರೆ ತಮ್ಮನ್ನು ತಾವು ದೇಶಪ್ರೇಮಿಗಳು ಎಂದು ಕರೆದುಕೊಳ್ಳುತ್ತಾರೆ. ಕಾಂಗ್ರೆಸ್ಗೆ ದೇಶ ಭಕ್ತಿ ಪಾಠ ಮಾಡಲು ಇವರು ಯಾರು? ದೇಶಭಕ್ತಿ ಹುಟ್ಟಿದ್ದೇ ಕಾಂಗ್ರೆಸ್ನಿಂದ. ವಂದೇ ಮಾತರಂ ಹುಟ್ಟಿದ್ದು ಕಾಂಗ್ರೆಸ್ನಿಂದ. ಗಾಂಧಿ, ಅಂಬೇಡ್ಕರ್, ಪಟೇಲ್ರ ಪ್ರತಿಮೆ ಮಾಡಿ ನಾವು ಅವರ ಪರವಾಗಿದ್ದೇವೆ ಎಂದು ನಾಟಕವಾಡಿದರೆ ಜನರಿಗೆ ಮೋಸ ಮಾಡಬಹುದು ಎಂದು ಕೊಂಡಿದ್ದಾರೆ ಎಂದು ದೂರಿದರು.
ಆಶ್ವಾಸನೆಗೆ ಸೀಮಿತ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಆಶ್ವಾಸನೆಗೆ ಮಾತ್ರ ಸೀಮಿತವಾಗಿದೆ. ಅಸಂಘಟಿತ ಕಾರ್ಮಿಕರಿಗೆ ಪರಿಹಾರ ಧನ ನೀಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಗುರುತಿನ ಚೀಟಿ ಮಾಡಿಸಿ ಕೊಡಬೇಕು. ಒಂದು ಕ್ಷೇತ್ರದಲ್ಲಿ ಕನಿಷ್ಟ 50 ಸಾವಿರ ಗುರುತಿನ ಚೀಟಿ ಮಾಡಿಸಬೇಕು. ಎಲ್ಲಾ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಜನರ ಪಕ್ಷ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತ್ ಬಂದ್ಗೆ ಬೆಂಬಲ:
ಕೃಷಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್ಗೆ ಕಾಂಗ್ರೆಸ್ ಬೆಂಬಲವಿದೆ. ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದರೂ, ಸಂಸತ್ ಹಾಗೂ ಶಾಸನ ಸಭೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಬದುಕಲು ಬಿಡುತ್ತಿಲ್ಲ.
ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲ. ಬೆಂಬಲ ಬೆಲೆ ಇಲ್ಲ. ಸಾಲ ಮಾಡಿ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಬಂಡವಾಳ ಶಾಯಿಗಳಿಗೆ ಕೃಷಿ ಭೂಮಿ ಹಾಗೂ ರೈತರ ಬದುಕನ್ನೇ ಧಾರೆಯೆರೆಯುವ ಮೂಲಕ ರೈತರನ್ನು ಮತ್ತಷ್ಟು ಘಾಸಿಗೊಳಿಸುತ್ತಿದ್ದಾರೆ.
ಕೃಷಿ ಕಾಯ್ದೆ ಬಗ್ಗೆ ದೇಶಾದ್ಯಂತ ವಿರೋಧವಿದ್ದರೂ, ಸರ್ಕಾರ ಹಠಮಾರಿತನ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಸ್ವಯಿಚ್ಛೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಅರ್ಜಿ ಹಾಕಿಕೊಂಡು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ಜನರಿಗೆ ಬೇಳೆ, ಅಕ್ಕಿ, ಎಣ್ಣೆ ಸೇರಿ ಆಹಾರ ಪದಾರ್ಥಗಳಿರುವ 20 ಕೆಜಿ ಆಹಾರ ಕಿಟ್ ವಿತರಿಸಲಾಯಿತು. ಕ್ಷೇತ್ರದ ಶಾಸಕ ಬೈರತಿ ಸುರೇಶ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಎಂ.ಆರ್. ಸೀತಾರಾಮ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಭಾಗವಹಿಸಿದ್ದರು.