ಕರ್ನಾಟಕ

karnataka

ETV Bharat / city

ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಆಕ್ಸಿಜನ್ ನೀಡುತ್ತಿಲ್ಲವೇಕೆ?: ಎಸ್​.ಆರ್​. ಪಾಟೀಲ್​ - ಎಸ್ಆರ್ ಪಾಟೀಲ್ ಟ್ವೀಟ್

ಕೇಂದ್ರ-ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಡಬಲ್ ಇಂಜಿನ್​ನಂತೆ ಕೆಲಸ ಮಾಡ್ತೀವಿ ಅಂದಿದ್ದರು ಕೇಂದ್ರ ಬಿಜೆಪಿ ನಾಯಕರು. ಈಗ ರಾಜ್ಯಕ್ಕೆ ಬೇಕಾದ 1,800 ಮೆಟ್ರಿಕ್ ಟನ್ ಆಕ್ಸಿಜನ್​ನಲ್ಲಿ ಅರ್ಧವನ್ನೂ ಪೂರೈಸುತ್ತಿಲ್ಲ ನರೇಂದ್ರ ಮೋದಿ ಸರ್ಕಾರ.

SR Patil
SR Patil

By

Published : May 6, 2021, 11:03 PM IST

ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವ ಆಮ್ಲಜನಕ ಪೂರೈಕೆಗೆ ಕೇಂದ್ರ ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್​.ಆರ್​. ಪಾಟೀಲ ಪ್ರಶ್ನಿಸಿದ್ದಾರೆ.

ಟ್ವೀಟ್ ಮೂಲಕ ಈ ಪ್ರಶ್ನೆ ಮಾಡಿರುವ ಅವರು, ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್​ನಷ್ಟು ಆಕ್ಸಿಜನ್ ಪೂರೈಕೆ ಮಾಡುವಂತೆ ನಿನ್ನೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿತ್ತು. ಇವತ್ತು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಕರ್ನಾಟಕಕ್ಕೆ ಆಕ್ಸಿಜನ್ ಕೊಡಲು ಕೇಂದ್ರ ಒಪ್ಪುತ್ತಿಲ್ಲ ಯಾಕೆ..? ದೆಹಲಿ ಸರ್ಕಾರಕ್ಕೆ 700 ಮೆಟ್ರಿಕ್ ಟನ್ ಆಕ್ಸಿಜನ್ ಕೊಡುವಂತೆ ದೆಹಲಿ ಹೈಕೋರ್ಟ್ ಆದೇಶ ಮಾಡಿದ್ದನ್ನು ಕೇಂದ್ರ ಸರ್ಕಾರ ಯಥಾವತ್ತು ಪಾಲನೆ ಮಾಡಿದೆ. ಕೋರ್ಟ್ ಹೇಳಿದ್ದಕ್ಕಿಂತಲೂ ಹೆಚ್ಚುವರಿಯಾಗಿ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಕರ್ನಾಟಕದ ಜನರ ಜೀವಕ್ಕೆ ಬೆಲೆ ಇಲ್ಲವಾ ನರೇಂದ್ರ ಮೋದಿ ಅವರೇ..? ಎಂದು ಕೇಳಿದ್ದಾರೆ.

ಡಬಲ್ ಇಂಜಿನ್ ಏನಾಯ್ತು?

ಕೇಂದ್ರ-ಕರ್ನಾಟಕದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಡಬಲ್ ಇಂಜಿನ್​ನಂತೆ ಕೆಲಸ ಮಾಡ್ತೀವಿ ಅಂದಿದ್ದರು ಕೇಂದ್ರ ಬಿಜೆಪಿ ನಾಯಕರು. ಈಗ ರಾಜ್ಯಕ್ಕೆ ಬೇಕಾದ 1,800 ಮೆಟ್ರಿಕ್ ಟನ್ ಆಕ್ಸಿಜನ್​ನಲ್ಲಿ ಅರ್ಧವನ್ನೂ ಪೂರೈಸುತ್ತಿಲ್ಲ ನರೇಂದ್ರ ಮೋದಿ ಸರ್ಕಾರ. ಇದನ್ನು ನೋಡಿಯೂ ಬಿಎಸ್ ಯಡಿಯೂರಪ್ಪ ಅವರು ಮೌನವಾಗಿರುವುದೇಕೆ..? ಪ್ರಧಾನಿ ಮೋದಿ ಅವರು ಅಧಿಕಾರ ಹಿಡಿದಾಗಿನಿಂದಲೂ ಕರ್ನಾಟಕದ ಜನರನ್ನು ಶತ್ರುಗಳಂತೆ ನೋಡುತ್ತಿದ್ದಾರೆ. ಜಿಎಸ್​ಟಿ ಪಾಲು, ನೆರೆ ಪರಿಹಾರ, ಈಗ ಕೋವಿಡ್ ನೆರವು, ಆಕ್ಸಿಜನ್ ಇಲ್ಲದೇ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಜನರ ಜೀವ ಉಳಿಸಬೇಕಾದ ಕೇಂದ್ರ ಸರ್ಕಾರ ಜನರ ಜೀವ ತೆಗೆಯೋ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಸಾವೇ ಗತಿ

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಆಕ್ಸಿಜನ್ ಅಗತ್ಯ ಹೆಚ್ಚುತ್ತಿದೆ. ಸರ್ಕಾರದ ಲೆಕ್ಕದ ಪ್ರಕಾರವೇ ಆಕ್ಸಿಜನ್ ಇಲ್ಲದೆ ಕಳೆದ ಮೂರು ದಿನಗಳಲ್ಲಿ 40 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು ಸರ್ಕಾರ ಮುಚ್ಚಿಟ್ಟ ಸಾವುಗಳು ಅದೆಷ್ಟಿದೆಯೋ ಗೊತ್ತಿಲ್ಲ. ಈ ಸರ್ಕಾರವನ್ನು ನಂಬಿಕೊಂಡರೆ ಸಾವೇ ಗತಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯಕ್ಕೆ ರಾಜ್ಯದ ಆಕ್ಸಿಜನ್ ಅವಶ್ಯಕತೆ 1,800 ಮೆಟ್ರಿಕ್ ಟನ್​ನಷ್ಟಿದೆ. ಆದ್ರೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ಪಾಲು ಕೇವಲ 865 ಮೆಟ್ರಿಕ್ ಟನ್. ಆದರೆ ಕೇಂದ್ರದಿಂದ ರಾಜ್ಯಕ್ಕೆ ಪೂರೈಕೆಯಾಗುತ್ತಿರುವುದು ಕೇವಲ 675 ಟನ್ ನಷ್ಟು ಆಕ್ಸಿಜನ್ ಮಾತ್ರ ಎಂದಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ 1,043 ಮೆಟ್ರಿಕ್ ಟನ್​ನಷ್ಟಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಅನ್ನು ಮೋದಿ ಸರ್ಕಾರ ಬೇರೆ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಿದೆ. ಇದು ಅಕ್ಷಮ್ಯ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರೋ ಆಕ್ಸಿಜನ್ ನಮ್ಮಲ್ಲೇ ಬಳಕೆಯಾಗಬೇಕು. ಕೂಡಲೇ ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿರೋ ಆಕ್ಸಿಜನ್​ ಅನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಪೂರೈಕೆ ಮಾಡಬೇಕು. ರಾಜ್ಯದಿಂದ ಗೆದ್ದು ಹೋಗಿರುವ 25 ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು. ಇಲ್ಲವಾದರೆ ರಾಜ್ಯದಲ್ಲಿ ಸಂಭವಿಸೋ ಸಾವುಗಳಿಗೆ ಪ್ರಧಾನಿ ಮೋದಿಯವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details