ಬೆಂಗಳೂರು:ಪ್ರಧಾನಿ ಮೋದಿ ಜತೆ ಮಾತನಾಡುವ ಸಂದರ್ಭ ರಾಜ್ಯದ ಅತಿವೃಷ್ಟಿ ಸಮಸ್ಯೆಯನ್ನು ಸಮರ್ಪಕವಾಗಿ ವಿವರಿಸುವ ಕಾರ್ಯವನ್ನು ಸಚಿವರು ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ನೆರೆ ಸಮಸ್ಯೆ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅತಿವೃಷ್ಟಿ ಬಗ್ಗೆ ಪ್ರಧಾನಿ ಮೋದಿ ರಾಜ್ಯ ಸಚಿವರ ಸಭೆ ನಡೆಸುತ್ತಿರುವುದು ಸ್ವಾಗತಾರ್ಹ. ಕಳೆದ ಬಾರಿ ರಾಜ್ಯ ಅತಿವೃಷ್ಟಿಯಿಂದ ತತ್ತರಿಸುತ್ತಿರುವಾಗ ಕರ್ನಾಟಕದ ಕಡೆ ತಿರುಗಿ ನೋಡದೆ ನಿರ್ಲಕ್ಷಿಸಿದ್ದ ಪ್ರಧಾನಿ ಈ ಬಾರಿಯಾದರೂ ಎಚ್ಚೆತ್ತುಕೊಂಡಿದ್ದಾರೆ. ಈ ಅವಕಾಶವನ್ನು ರಾಜ್ಯ ಬಳಸಿಕೊಳ್ಳಬೇಕು ಎಂದಿದ್ದಾರೆ.
ಹಳೆಯ ಬಾಕಿ ಕೇಳಿ
ಪ್ರಧಾನಿ ನಡೆಸುವ ಸಭೆಯಲ್ಲಿ ಭಾಗವಹಿಸುತ್ತಿರುವ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಆರ್.ಅಶೋಕ್ ಅವರು ರಾಜ್ಯದ ಜನರ ಹಿತದೃಷ್ಟಿಯಿಂದಾದರೂ ಅತಿವೃಷ್ಟಿ ಪರಿಸ್ಥಿತಿಯನ್ನು ಸ್ವಲ್ಪ ಧೈರ್ಯ ಮಾಡಿ ವಿವರಿಸಿ ಹೆಚ್ಚು ಪರಿಹಾರ ಪಡೆಯುವ ಪ್ರಯತ್ನ ಮಾಡಬೇಕು. ಕಳೆದ ವರ್ಷದ ಅತಿವೃಷ್ಟಿಯ ಅಂದಾಜು ನಷ್ಟ ₹1 ಲಕ್ಷ ಕೋಟಿ. ರಾಜ್ಯ ಸರ್ಕಾರದ ವರದಿ ಪ್ರಕಾರ ನಷ್ಟ ₹50,000 ಕೋಟಿ. ಪರಿಹಾರ ಕೇಳಿದ್ದು ₹35,000 ಕೋಟಿ. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ₹1,860 ಕೋಟಿ ಮಾತ್ರ. ರಾಜ್ಯದ ಸಚಿವರು ಹಳೆಯ ಬಾಕಿಯನ್ನೂ ಕೇಳುವ ಧೈರ್ಯ ಮಾಡಲಿ ಎಂದು ಹೇಳಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿ ಬಿಎಸ್ವೈ ಅತಿವೃಷ್ಟಿಯ ವರದಿ ಕಳಿಸಿರುವುದು ಆಗಸ್ಟ್ವರೆಗಿನ ಹಾನಿ ಬಗ್ಗೆ ಮಾತ್ರ. ಸೆಪ್ಟೆಂಬರ್-ಅಕ್ಟೋಬರ್ ತಿಂಗಳ ಅತಿವೃಷ್ಟಿ ವರದಿ ಕಳಿಸದೆ ಸರ್ಕಾರ ನೊಂದ ಜನತೆಗೆ ಮೋಸ ಮಾಡಿದೆ. ಈ ಬಾರಿ ಪರಿಹಾರವನ್ನು ಕೇಳುವಾಗ ಇದನ್ನು ಮೋದಿ ಅವರ ಗಮನಕ್ಕೆ ತರಬೇಕು. ಅವರು ಭಾನುವಾರ ಘೋಷಿಸಿರುವ ಒಂದು ಲಕ್ಷ ಕೋಟಿ ರೂಪಾಯಿ ಕೃಷಿ ಪ್ಯಾಕೇಜ್, ಕಳೆದ ಮೇ ತಿಂಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ ಕೋವಿಡ್ ಪರಿಹಾರ ಯೋಜನೆಯ ಭಾಗವಾಗಿದೆ. ಅದನ್ನೇ ಹೊಸ ಪ್ಯಾಕೇಜ್ ಎಂದು ಬಿಂಬಿಸಿ ಪ್ರಧಾನಿಯವರು ರೈತರ ದಾರಿ ತಪ್ಪಿಸಿದ್ದಾರೆ ಎಂದು ದೂರಿದ್ದಾರೆ.