ಬೆಂಗಳೂರು:ನೀರವ್ ಮೋದಿ, ವಿಜಯ್ ಮಲ್ಯ, ಮುಕುಲ್ ಚೋಕ್ಸಿ ಯಾವ ರೀತಿ ಹಗರಣ ಮಾಡಿ ದೇಶವನ್ನು ತೊರೆದು ಹೋಗಿದ್ದಾರೋ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮಹಾ ವಂಚನೆಯ ಹಗರಣವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು. ಬೆಂಗಳೂರಿನ ಗೋವಿಂದ ರಸ್ತೆಯ ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ 'ಸೌಭಾಗ್ಯ ಲಕ್ಷ್ಮಿ ಶುಗರ್ ಲಿಮಿಟೆಡ್' ಎಂಬ ಸಕ್ಕರೆ ಕಾರ್ಖಾನೆ ಇದ್ದು, ಇದರ ಮಾಲೀಕ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕ್ಗಳ ಅಡಿಯಲ್ಲಿ ಬರುವ ಸುಮಾರು 15 ಬ್ಯಾಂಕ್ಗಳಿಂದ 366 ಕೋಟಿ ಸಾಲ ಮಾಡಿದ್ದಾರೆ. ಯೂನಿಯನ್ ಬ್ಯಾಂಕ್ನಿಂದ 20 ಕೋಟಿ, ತೆರಿಗೆ ಇಲಾಖೆಯಿಂದ 200 ಕೋಟಿ ಬಾಕಿ ಉಳಿಸಿಕೊಂಡಿದ್ದು, ಹರಿಯಂತ್ ಸಹಕಾರಿ ಬ್ಯಾಂಕ್ನಿಂದ 20 ಕೋಟಿ ಸೇರಿ ಒಟ್ಟು 660 ಕೋಟಿ ಸಾಲ ಪಡೆದಿದ್ದಾರೆ ಎಂದು ವಿವರಿಸಿದರು.
2017ರಲ್ಲಿ ಅಪೆಕ್ಸ್ ಬ್ಯಾಂಕ್ನವರು ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯನ್ನು ಎನ್ಪಿಎ ಎಂದು ಘೋಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 11 ಲಕ್ಷ ಕೋಟಿ ಸಾಲವನ್ನು ಎನ್ಪಿಎ ಎಂದು ಘೋಷಣೆ ಮಾಡಿ ಮನ್ನಾ ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ ಎನ್ಪಿಎ ಆಗಿರುವ ಕಂಪನಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್. ನಂತರ ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೊಟೀಸ್ ಜಾರಿಗೊಳಿಸುತ್ತಾರೆ. ಆಗ ಅವರು 2019ರವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.
ಬಳಿಕ ನೊಟೀಸ್ ಅನ್ನು ಧಾರವಾಡ ಹೈಕೋರ್ಟ್ ನಲ್ಲಿರುವ ದ್ವಿಸದಸ್ಯಪೀಠಕ್ಕೆ ತಡೆಯಾಜ್ಞೆ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯ 28-11-2019ರಲ್ಲಿ ಮಧ್ಯಂತರ ತೀರ್ಪು ನೀಡಿ, 'ನೀವು ಆರು ವಾರಗಳ ಒಳಗಾಗಿ 366 ಕೋಟಿ ಸಾಲದಲ್ಲಿ ಅರ್ಧದಷ್ಟು ಹಣವನ್ನು ಪಾವತಿಸಿ ನಂತರ ನ್ಯಾಯಾಲಯಕ್ಕೆ ಬನ್ನಿ' ಎಂದು ಸೂಚಿಸುತ್ತದೆ.
ಸಂಪೂರ್ಣ ನ್ಯಾಯಾಲಯದ ವಿಚಾರಣೆ ವಿವರ ನೀಡಿದ ಲಕ್ಷ್ಮಣ್, ಕೋರ್ಟ್ಗೆ ಸರ್ಕಾರ ಇಲ್ಲಿಯವರೆಗೂ ಯಾವುದೇ ಆಕ್ಷೇಪ ಸಲ್ಲಿಸಿಲ್ಲ. ಈ ಷಡ್ಯಂತ್ರದ ಹಿಂದೆ ರಾಜ್ಯ ಸರ್ಕಾರ, ಕೇಂದ್ರದ ಸಹಕಾರ ಸಚಿವಾಲಯದ ಮಂತ್ರಿಗಳು ಅಂದರೆ ಅಮಿತ್ ಶಾ ಅವರು ಇದ್ದಾರೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕಳೆದ 10 ತಿಂಗಳಲ್ಲಿ 8 ಬಾರಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಅವರು ಇಷ್ಟು ಬಾರಿ ಭೇಟಿ ಮಾಡಿರುವುದು ಏಕೆ ಎಂಬುದು ಈಗ ಅರ್ಥವಾಗುತ್ತದೆ ಎಂದರು.