ಬೆಂಗಳೂರು:ನೇರ ಹಾಗೂ ನಿಷ್ಠುರವಾದ ಮಾತಿಗೆ ಹೆಸರಾಗಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಜೆಡಿಎಸ್ ನಾಯಕರೊಂದಿಗೆ ನೇರವಾಗಿ ಸಂಪರ್ಕ ಮಾಡುತ್ತಿದ್ದರು ನಾಯಕರು ಮಾತ್ರ ಇವರ ನಡೆಗೆ ಮೌನವಹಿಸಿರುವುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ಶಿಸ್ತು ಉಲ್ಲಂಘನೆ ಆಗದಂತೆ ತಡೆಯಲು ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ನೇತೃತ್ವದಲ್ಲಿ ಕಾಂಗ್ರೆಸ್ ಶಿಸ್ತು ಸಮಿತಿ ರಚಿಸಲಾಗಿದ್ದು, ಇದಲ್ಲದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಯಾರೊಬ್ಬರು ಇದುವರೆಗೂ ಸಿಎಂ ಇಬ್ರಾಹಿಂಗೆ ತಾಕೀತು ಮಾಡುವ ಕಾರ್ಯ ಮಾಡಿಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ವಿಚಾರವಾಗಿ ಕಾಂಗ್ರೆಸ್‌ನ ಕೆಲ ನಾಯಕರು ಹೇಳಿಕೆ ನೀಡಿದ್ದರು. ಶಾಸಕರಾದ ಜಮೀರ್ ಅಹಮ್ಮದ್, ಸೌಮ್ಯ ರೆಡ್ಡಿ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಅವರಿಗೆ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡುವ ನಿರ್ಧಾರ ಮಾಡಿತ್ತು. ಹೈಕಮಾಂಡ್ ನಾಯಕರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿ ತಮ್ಮ ಬೆಂಬಲಿಗರು ಮುಂದಿನ ಸಿಎಂ ವಿಚಾರವಾಗಿ ಹೇಳಿಕೆ ನೀಡದಂತೆ ಸೂಚಿಸುವಂತೆ ತಿಳಿಸಿ ಪ್ರಹಸನಕ್ಕೆ ಕೊನೆ ಹಾಡಿತ್ತು.
ಆದರೆ ಪಕ್ಷ ಬಿಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿ ಕಳೆದ ಒಂದು ವರ್ಷದಿಂದ ಜೆಡಿಎಸ್ ಮುಖಂಡರನ್ನು ಬಹಿರಂಗವಾಗಿಯೇ ಭೇಟಿ ಯಾಗುತ್ತಿರುವ ಸಿಎಂ ಇಬ್ರಾಹಿಂ ಇತ್ತೀಚೆಗೆ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಸುದ್ದಿಯಾಗಿದ್ದರು. ಜೆಡಿಎಸ್ ಸೇರ್ಪಡೆಯಾಗಿ ಪಕ್ಷದ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಮಾಹಿತಿ ಸಹ ಇದ್ದು, ನಿರಂತರವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಇಬ್ರಾಹಿಂ ಭೇಟಿಮಾಡಿ ಸಮಾಲೋಚನೆ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಇದನ್ನು ಕಂಡು ಕಾಣದಂತಿದೆ.
ಕುತೂಹಲ ಮೂಡಿಸಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವನ್ನು ಬಿಡುವುದಕ್ಕೆ ದೃಢ ನಿರ್ಧಾರ ಮಾಡಿರುವ ಸಿಎಂ ಇಬ್ರಾಹಿಂ ಅವನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ ಪಕ್ಷದಲ್ಲಿ ತನಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂದು ಬೇಸರಗೊಂಡಿರುವ ಇಬ್ರಾಹಿಂ ಇಲ್ಲೇ ಉಳಿಯುವ ಯೋಚನೆ ಮಾಡಿಲ್ಲ. ಒಂದೊಮ್ಮೆ ಶಿಸ್ತುಕ್ರಮ ಕೈಗೊಂಡರೆ ಅಲ್ಪಸಂಖ್ಯಾತ ಮುಸ್ಲಿಂ ನಾಯಕರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂಬ ಅಪವಾದಕ್ಕೆ ಗುರಿಯಾಗುತ್ತೇವೆ ಎಂಬ ಆತಂಕವೂ ಕಾಂಗ್ರೆಸ್‌ಗೆ ಇದೆ.