ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬಿರುಸಿನ ರಾಜಕೀಯ ಚಟುವಟಿಕೆ ಆರಂಭಗೊಂಡಿದೆ. ರಾಜ್ಯ ಸರ್ಕಾರ ರಚನೆಗೂ ಆಪರೇಷನ್ ಕಮಲ ಅಸ್ತ್ರ ಪ್ರಯೋಗಿಸಿದ್ದ ಬಿಜೆಪಿ ನಾಯಕರು, ಬಿಬಿಎಂಪಿಯಲ್ಲೂ ಅದನ್ನು ಮುಂದುವರಿಸುತ್ತಾರೆಯೇ ಎಂಬ ಅನುಮಾನ ಮೂಡಿದೆ.
ಬೆಂಗಳೂರು ವ್ಯಾಪ್ತಿಯ ಕಾಂಗ್ರೆಸ್ನ ನಾಲ್ವರು ಅನರ್ಹ ಶಾಸಕರ ಬೆಂಬಲಿಗ ಪಾಲಿಕೆ ಸದಸ್ಯರೂ ಬಿಜೆಪಿಗೆ ಸಾಥ್ ನೀಡುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕೆಲ ಕಾಂಗ್ರೆಸ್ ಪಾಲಿಕೆ ಸದಸ್ಯರು ಭೇಟಿಯಾಗಿದ್ದಾರೆ. ಯಶವಂತಪುರ ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರಾದ ವೇಲುನಾಯ್ಕರ್, ಶ್ರೀನಿವಾಸ್ ಪ್ರಸಾದ್ ಭೇಟಿಯಾಗಿರುವ ಫೋಟೋ ಬಹಿರಂಗವಾಗಿದೆ.
ಹೊಸ ಸಚಿವರಿಗೆ ಶುಭಾಶಯ ಹೇಳುವ ನೆಪದಲ್ಲಿ ಪಾಲಿಕೆ ಮೇಯರ್ ಚುನಾವಣೆ ಕುರಿತು ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಸೆ. 28ರಂದು ಪಾಲಿಕೆಯ ನೂತನ ಮೇಯರ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ನೂತನ ಮೇಯರ್ ಆಯ್ಕೆ ಹಿನ್ನೆಲೆ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಡಳಿತ ಪಕ್ಷದ ನಾಯಕ ವಾಜೀದ್, ಈಗ ಬಿಜೆಪಿ ಮುಖಂಡರೊಂದಿಗೆ ಗುರುತಿಸಿಕೊಂಡರೂ ಮತದಾನದ ದಿನ ಕಾಂಗ್ರೆಸ್ಗೇ ಬೆಂಬಲ ನೀಡಲಿದ್ದಾರೆ ಎಂದು ಸಮರ್ಥಿಸಿಕೊಂಡರು. ಕಾರ್ಪೋರೇಟರ್ ಜಿ.ಕೆ.ವೆಂಕಟೇಶ್ ಪ್ರತಿಕ್ರಿಯಿಸಿ, ಚುನಾವಣೆ ಬಗ್ಗೆ ಮಾತುಕತೆ ನಡೆದಿಲ್ಲ. ಕಂದಾಯ ಸಚಿವರಾಗಿರುವ ಕಾರಣ ಶುಭಾಶಯ ತಿಳಿಸಿದೆವು ಅಷ್ಟೇ ಎಂದರು. ಆಪರೇಷನ್ ಕಮಲ ನಡೀತಿದ್ಯಾ ಎಂಬ ಮಾತನ್ನು ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಕೂಡಾ ತಳ್ಳಿಹಾಕಿದರು.