ಬೆಂಗಳೂರು: ವಿಧಾನ ಪರಿಷತ್ ಚುನಾವಣೆ(Legislative council election) ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ(congress candidates list) ಈವರೆಗೂ ಪ್ರಕಟವಾಗಿಲ್ಲ.
ಬಿಜೆಪಿ ತಮ್ಮ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಎರಡು ದಿನ ಆಗಿದೆ. ಆದರೆ, ಕಾಂಗ್ರೆಸ್ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ನಿನ್ನೆ ರಾತ್ರಿಯೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈವರೆಗೂ ಪಟ್ಟಿ ಪ್ರಕಟವಾಗಿಲ್ಲ.
ಈ ಪಟ್ಟಿಗೆ ಸಹಿ ಹಾಕಿಸಿಕೊಂಡು ಬರಲು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಪಸಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಅಂತಿಮ ಪಟ್ಟಿ ಮಾತ್ರ ಹೈಕಮಾಂಡ್ನಿಂದ ಹೊರ ಬೀಳುತ್ತಿಲ್ಲ.
ಆರೇಳು ಹಾಲಿ ಸದಸ್ಯರು ಸ್ಪರ್ಧಿಸುತ್ತಿಲ್ಲವಾದ್ದರಿಂದ ಅವರ ಬದಲಿಗೆ ಘೋಷಿತವಾಗುವ ಹೆಸರಿನ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ. ಅಲ್ಲದೇ ತಮ್ಮ ಮತದಾರರನ್ನು ಸಂಪರ್ಕಿಸಿ ಮನವಿ ಮಾಡಲು ಅಧಿಕೃತ ಪಟ್ಟಿ ಪ್ರಕಟವಾದ ನಂತರವೇ ಅವಕಾಶ ಒದಗಿ ಬರಲಿದೆ ಎಂದು ನಂಬಿರುವ ಆಕಾಂಕ್ಷಿಗಳಿಗೆ ಸಮಯ ಹೋದಂತೆ ಆತಂಕ, ದುಗುಡ ಶುರುವಾಗಿದೆ.
ವಿಳಂಬದ ಹಿಂದೆ ಪಟ್ಟಿ ಪರಿಷ್ಕರಣೆ ಕಾರಣ ಇರಬಹುದಾ ಎನ್ನುವ ಆತಂಕ ಅಭ್ಯರ್ಥಿಗಳಾಗುವ ಭರವಸೆ ಪಡೆದಿರುವ ಕಾಂಗ್ರೆಸ್ ನಾಯಕರನ್ನು ಕಾಡಲಾರಂಭಿಸಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಬಣ ರಾಜಕಾರಣಕ್ಕೆ ಬರವಿಲ್ಲ. ಎರಡು ಪ್ರಮುಖ ಬಣಗಳ ಜತೆ ಇನ್ನಷ್ಟು ಉಪ ಬಣಗಳು ನಿರ್ಮಾಣಗೊಂಡಿವೆ. ಇದರಿಂದ ಯಾರ ಪ್ರಭಾವ ಎಷ್ಟು ಇದೆ ಎನ್ನುವುದನ್ನು ಅರಿಯಲಾಗದೇ ಹಲವು ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಡಿಕೆಶಿ ಹಿಡಿದುಕೊಂಡು ಹೋಗಿರುವ ಪಟ್ಟಿಗೆ ಹೈಕಮಾಂಡ್ ಸಮ್ಮತಿ ನೀಡಿದ್ದರೆ ನಿನ್ನೆಯೇ ಪಟ್ಟಿ ಹೊರ ಬೀಳಬೇಕಿತ್ತು. ಆದರೆ, ಈವರೆಗೂ ಪಟ್ಟಿ ಹೊರ ಬರದಿರುವುದನ್ನು ಗಮನಿಸಿ ಕೆಲವರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಇದೆ.