ಬೆಂಗಳೂರು:ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಟ್ವೀಟ್ ವಾರ್ ನಡೆಸಿವೆ. ಟ್ವೀಟ್ ಮಾಡಿ ಪರಸ್ಪರ ಲೇವಡಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪಕ್ಷದ ಕೆಲ ನಾಯಕರ ವಿಚಾರವಾಗಿ ಸಾಕಷ್ಟು ಕಿತ್ತಾಟ ನಡೆಸಿಕೊಂಡಿವೆ. ಕಾಂಗ್ರೆಸ್ ಪಕ್ಷವು ಬಿಜೆಪಿ ವರ್ಸಸ್ ಬಿಜೆಪಿ ಹೆಸರಿನಲ್ಲಿ ಸರಣಿ ಟ್ವೀಟ್ ಮಾಡಿದ್ದರೆ, ಬಿಜೆಪಿ ಪಕ್ಷವು ಮಹಾನಾಯಕ ವರ್ಸಸ್ ಮೀರ್ ಸಾದಿಕ್ ಹೆಸರಿನಲ್ಲಿ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.
ಮೊದಲು ಟ್ವೀಟ್ ಮಾಡಿದ ಕಾಂಗ್ರೆಸ್ ಪಕ್ಷ, ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕತ್ತಿ ಮಸೆಯುತ್ತಿದ್ದ ಮೀರ್ ಸಾದಿಕ್ ಯಾರೆನ್ನುವುದು ಈಗ ತಿಳಿದಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಚಿವ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಏಕೆಂದರೆ ಸಂಚಿನ ಸೂತ್ರದಾರನೇ ನಳಿನ್ ಕುಮಾರ್ ಕಟೀಲು ಎಂದು ಲೇವಡಿ ಮಾಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕೂಡ ಟ್ವೀಟ್ ಮೂಲಕವೇ ಕಾಲೆಳೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾಧಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಹೇಳಿದೆ.
ಕಾಮಿಡಿ ಪಾತ್ರ
ಕಾಂಗ್ರೆಸ್ ಪಕ್ಷ ಮುಂದುವರಿದು, ಬಿಜೆಪಿ ಪಕ್ಷದ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲು ಬಗ್ಗೆ ಬಿಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆಯೇ ಮನವರಿಕೆಯಾಗಿತ್ತು. ಆದರೆ, ಸಚಿವರಾದ ಜಗದೀಶ್ ಶೆಟ್ಟರ್ ಹಾಗೂ ಕೆಎಸ್ ಈಶ್ವರಪ್ಪ ಅವರು ತಮ್ಮ ಬಗಲಿನಲ್ಲಿಯೇ ಬೆಂಕಿ ಇದ್ದಿದ್ದನ್ನು ಅರಿತಿರಲಿಲ್ಲ. ಕಾಮಿಡಿ ಪಾತ್ರ ಮಾಡುತ್ತಿದ್ದ ಕಟೀಲ್, ಈಗ ಬಿಜೆಪಿಯ ಹಲವರಿಗೆ ವಿಲ್ಲನ್ ಪಾತ್ರಧಾರಿಯಾಗಿದ್ದಾರೆ ಎಂದಿದೆ.
ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ ಬಿಜೆಪಿ, ಮಹಾನಾಯಕನ ಸುತ್ತ ಐದು ಕಾರ್ಯಾಧ್ಯಕ್ಷರ ನೇಮಕವಾಗುವಂತೆ ನೋಡಿಕೊಂಡಿದ್ದು ಮೀರ್ ಸಾದಿಕ್‌ನ ತಂತ್ರದ ಒಂದು ಭಾಗ. ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡುವುದರಲ್ಲೇ ನೆಮ್ಮದಿ ಕಾಣುತ್ತಿರುವ ಮಹಾನಾಯಕನಿಗೆ ಉಡಿಯಲ್ಲಿ ಮೀರ್ ಸಾದಿಕ್‌ನಂತಹ ಕೆಂಡ ಕಟ್ಟಿಕೊಂಡಿರುವ ಬಗ್ಗೆ ಅರಿವಿಲ್ಲ. ಹೋರಾಟವಿಲ್ಲದೇ ಹುದ್ದೆ ಬಯಕೆ, ಕದ್ದ ವಾಚು ಧರಿಸಿ ಶೋಕಿ ಮೆರೆಯುವಿಕೆ, ಮಿಮಿಕ್ರಿ ಕಲಾವಿದರ ಮೂಲಕ ನಕಲಿ ಆಡಿಯೋ ತಯಾರಿಕೆ. ಮೀರ್ ಸಾದಿಕ್ ಸೃಷ್ಟಿಸುವ ಕಪಟ ನಾಟಕಗಳು ಒಂದೋ ಎರಡೋ!? ಎಂದು ಕೇಳಿದೆ.
ಚಾಮರಾಜಪೇಟೆಯ ಡಕೋಟಾ ಗಾಡಿ ಡ್ರೈವರ್‌ನಂತಹ ಶಿಷ್ಯರಿಗೆ ತಾನು ತಕ್ಕ ಗುರು ಎಂದು ಮೀರ್ ಸಾದಿಕ್ ಸಾಬೀತು ಪಡಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುವವರಿಗೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು ಎಂದು ಬಿಜೆಪಿ ಹೇಳಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ? ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ. ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್ ಸಾದಿಕ್ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? ಎಂದು ಕೇಳಿದೆ.